ನವದೆಹಲಿ:30 ವರ್ಷಗಳ ಹಿಂದಿನ ಪ್ರಕರಣವೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, "ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯೇ ಸ್ವತಃ ಶಿಕ್ಷೆಯಾಗಬಹುದು" ಎಂದು ವಿಷಾದ ವ್ಯಕ್ತಪಡಿಸಿದೆ.
30 ವರ್ಷಗಳ ಹಿಂದೆ ತನ್ನ ಪತ್ನಿಗೆ ಕಿರುಕುಳ ನೀಡಿ, ಆಕೆಯನ್ನು ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದ ಆರೋಪ ಹೊತ್ತಿರುವ ವ್ಯಕ್ತಿಯನ್ನು ಬುಧವಾರ ಸುಪ್ರೀಂ ಕೋರ್ಟ್ ದೋಷಮುಕ್ತಗೊಳಿಸಿತು. ಈ ಪ್ರಕರಣದ ವಿಚಾರಣೆಯ ವೇಳೆ, ಭಾರತದಲ್ಲಿರುವ ಸುದೀರ್ಘ ಮತ್ತು ಪ್ರಯಾಸಕರ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಎತ್ತಿ ತೋರಿಸಿರುವ ಸುಪ್ರೀಂ ಕೋರ್ಟ್, ವ್ಯಕ್ತಿಯೊಬ್ಬರು ತಮ್ಮನ್ನು ನಿರಪರಾಧಿ ಎಂದು ಸಾಬೀತುಪಡಿಸಲು 30 ವರ್ಷಗಳ ಸುದೀರ್ಘ ಕಾನೂನು ಹೋರಾಟ ಅನುಭವಿಸಬೇಕಾಗಿ ಬಂದಿದ್ದಕ್ಕೆ ಬೇಸರ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, "ಒಬ್ಬ ಆರೋಪಿಗೆ ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯೇ ಸ್ವತಃ ಶಿಕ್ಷೆಯಾಗಬಹುದು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕಾಗಿ ಮೇಲ್ಮನವಿದಾರನ ಶಿಕ್ಷೆಯು ಕಾನೂನಿನಲ್ಲಿ ಸಮರ್ಥನೀಯವಲ್ಲ ಎನ್ನುವ ತೀರ್ಮಾನವನ್ನು ತೆಗದುಕೊಳ್ಳಲು ನ್ಯಾಯಾಲಯಕ್ಕೆ 10 ನಿಮಿಷಗಳಿಂಗಿಂತ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ" ಎಂದು ಹೇಳಿದೆ.
"1993ರಲ್ಲಿ ಪ್ರಾರಂಭವಾದ ಅರ್ಜಿದಾರನ ಕಾನೂನು ಹೋರಾಟ 2024ರಲ್ಲಿ ಅಂದರೆ ಸುಮಾರು 30 ವರ್ಷಗಳ ಬಳಿಕ ಅಂತ್ಯಗೊಂಡಿದೆ. ಯಾವುದೇ ಅಪರಾಧಕ್ಕೆ ಶಿಕ್ಷೆಯಾಗದೇ ಇರಬಾರದು. ಆದರೆ ಅದೇ ಸಮಯದಲ್ಲಿ ಆರೋಪಿಯೊಬ್ಬನ ತಪ್ಪು ಕಾನೂನಿನ ಅಡಿಯಲ್ಲಿ ನಿರ್ಧಾರವಾಗಬೇಕು. ದಾಖಲೆಯಲ್ಲಿರುವ ಕಾನೂನು ಪುರಾವೆಗಳ ಆಧಾರದ ಮೇಲೆ ನಿರ್ಧರಿಸಬೇಕು" ಎಂದು ಪೀಠ ಒತ್ತಿ ಹೇಳಿತು.