ಗಯಾ(ಬಿಹಾರ):ಚಿಣ್ಣಾರಿಗಳೇ ಹಾಗೆ. ಅವಕ್ಕೆ ವಿಷಕಾರಿ ಹಾವೂ ಒಂದೇ, ಆಟಿಕೆಯೂ ಒಂದೇ. ಕೈಗೆ ಸಿಕ್ಕಿದ್ದನ್ನು ಬಾಯಿಯಲ್ಲಿ ಕಚ್ಚುವುದು ಎಳೆಕಂದಮ್ಮಗಳಿಗೆ ರೂಢಿ. ಬಿಹಾರದಲ್ಲಿ ಇಂಥದ್ದೊಂದು ಘಟನೆ ನಡೆಯಿತು.
ಮಗುವೊಂದು ಮನೆಯ ಮುಂದೆ ಆಟವಾಡುತ್ತಿದ್ದಾಗ ಅದರ ಬಳಿಗೆ ಬಂದ ಹಾವನ್ನು ಆಟಿಕೆ ಎಂದುಕೊಂಡು ಕಚ್ಚಿದೆ. ಅಚ್ಚರಿ ಎಂದರೆ, ಹಾವು ಸಾವನ್ನಪ್ಪಿದೆ. ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಹೌದು, ಒಂದು ವರ್ಷದ ಬಾಲಕ ಮೂರು ಅಡಿ ಉದ್ದದ ಹಾವನ್ನು ಆಟಿಕೆ ಎಂದುಕೊಂಡು ಕಚ್ಚಿ ಜಗಿದಿದ್ದಾನೆ. ಇದರಿಂದ ಸರಿಸೃಪ ಪ್ರಾಣ ಕಳೆದುಕೊಂಡಿದೆ. ಮಗುವಿನ ಬಾಯಲ್ಲಿ ಹಾವು ಕಂಡ ತಾಯಿ ಹೌಹಾರಿ ಅದನ್ನೆಸೆದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಮಗುವಿನ ಪ್ರಾಣಕ್ಕೆ ಅಪಾಯ ಇಲ್ಲ ಎಂದು ದೃಢಪಡಿಸಿದ್ದಾರೆ.
ಪೂರ್ಣ ವಿವರ:ಗಯಾ ಜಿಲ್ಲೆಯ ಜಮುಹರ್ ಗ್ರಾಮದಲ್ಲಿ ಮಗು ಮನೆಯ ಮುಂದೆ ಆಟವಾಡುತ್ತಿತ್ತು. ಮಗುವಿನ ತಾಯಿ ಮನೆಕೆಲಸದಲ್ಲಿ ನಿರತರಾಗಿದ್ದಾರೆ. ಈ ವೇಳೆ ಅಲ್ಲಿಗೆ 3 ಅಡಿ ಉದ್ದದ ಚಿಕ್ಕ ಹಾವು ಬಂದಿದೆ. ತನ್ನಲ್ಲಿಗೆ ಬಂದ ಹಾವನ್ನು ಆಟಿಕೆ ಎಂದುಕೊಂಡ ಹಸುಳೆ ಅದರ ಬೆನ್ನನ್ನು ಕಚ್ಚಿದೆ. ತೀವ್ರ ಗಾಯಗೊಂಡ ಪ್ರಾಣ ಬಿಟ್ಟಿದೆ.
ಇದೇ ವೇಳೆ ಅಲ್ಲಿಗೆ ತಾಯಿ ಬಂದಾಗ ಮಗುವಿನ ಕೈಯಲ್ಲಿ ಹಾವು ಕಂಡು ಗಾಬರಿಗೊಂಡಿದ್ದಾರೆ. ತಕ್ಷಣವೇ ಕಿತ್ತೆಸೆದು, ಹಸುಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿದ್ದಾರೆ. ಬಳಿಕ ಮಗುವಿನ ದೇಹದಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ. ಹೀಗಾಗಿ, ಮಗುವಿನ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ. ಬಳಿಕ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಆದರೆ, ಮಗು ಹಾವು ಕಚ್ಚಿದ ವಿಚಾರ ಹಳ್ಳಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜನರು ಮಗುವಿನ ಮನೆಗೆ ಆಗಮಿಸಿ ವಿಚಾರಿಸಿದ್ದಾರೆ. ಸತ್ತ ಹಾವನ್ನು ನೋಡಿ ಆಶ್ಚರ್ಯ ಪಟ್ಟಿದ್ದಾರೆ. ಹಾವು ವಿಷಕಾರಿಯಲ್ಲದ ಕಾರಣ ಮಗುವಿನ ಪ್ರಾಣಕ್ಕೆ ಅಪಾಯವಾಗಿಲ್ಲ. ಇಲ್ಲವಾದರೆ ದುರಂತ ಸಂಭವಿಸುತ್ತಿತ್ತು ಎಂದು ಮಾತನಾಡಿಕೊಂಡಿದ್ದಾರೆ.
ಹಾವು ಸುಟ್ಟು ತಿಂದ ಮಕ್ಕಳು:ಕೆಲ ದಿನಗಳ ಹಿಂದೆ ಉತ್ತರಾಖಂಡದಲ್ಲಿ ಮಕ್ಕಳಿಬ್ಬರು ಹಾವನ್ನು ಮೀನು ಎಂದುಕೊಂಡು ಸುಟ್ಟುಕೊಂಡು ತಿಂದ ಘಟನೆ ನಡೆದಿತ್ತು. ಕೊನೆ ಕ್ಷಣದಲ್ಲಿ ಇದನ್ನು ಗಮನಿಸಿದ ಆ ಮಕ್ಕಳ ತಾಯಿ ಗಾಬರಿಗೊಂಡು, ಅವರನ್ನು ಹಾವು ಸಂರಕ್ಷಣೆ ಮಾಡುವವರ ಬಳಿಗೆ ಕರೆದೊಯ್ದಿದ್ದರು. ಅದೃಷ್ಟವಶಾತ್, ಆ ಹಾವು ವಿಷಕಾರಿಯಲ್ಲದ ಕಾರಣ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದರು.
ಇದನ್ನೂ ಓದಿ:ಅಬ್ಬಬ್ಬಾ ಇದೇನಿದು! ಮೀನು ಅಂದುಕೊಂಡು ಹಾವನ್ನೇ ಸುಟ್ಟು ತಿಂದ ಮಕ್ಕಳು, ಮುಂದೇನಾಯ್ತು? - Children Ate Dead Snake