ವಯನಾಡ್:ಜುಲೈ 30ರಂದು ಜಿಲ್ಲೆಯಲ್ಲಿ ನಡೆದ ಭೀಕರ ಭೂ ಕುಸಿತದ ಕುರಿತು ರಕ್ಷಣಾ ಸೇವೆಗೆ ಮೊದಲು ಮಾಹಿತಿ ನೀಡಿದವರಲ್ಲಿ ವಯನಾಡ್ನ ಖಾಸಗಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ನೀತು ಜೊಜೊ ಕೂಡ ಒಬ್ಬರು. ದುರಂತ ಎಂದರೆ, ರಕ್ಷಣಾ ಸಿಬ್ಬಂದಿಯು ಅವರ ಸಹಾಯಕ್ಕೆ ಆಗಮಿಸುವ ಮುನ್ನವೇ ಅವರು ಉಸಿರು ಚೆಲ್ಲಿದರು. ಚೂರಲ್ಮಾಲ್ನಲ್ಲಿ ಮೊದಲ ಗುಡ್ಡ ಕುಸಿತ ಸಂದರ್ಭದಲ್ಲಿ ನೀತು ಜೊಜೊ ಮತ್ತು ಅವರ ಕುಟುಂಬ ತಕ್ಷಣಕ್ಕೆ ಸಹಾಯಕ್ಕೆ ಕರೆ ಮಾಡಿದರ ಆಡಿಯೋ, ಇದೀಗ ವೈರಲ್ ಆಗಿದೆ.
ಜುಲೈ 30ರಂದು ನಸುಕಿನಲ್ಲಿ ನಡೆದ ಈ ದುರಂತದಲ್ಲಿ ತಾವು ಅನುಭವಿಸಿದ ನೋವು, ಮೊದಲ ಗುಡ್ಡ ಕುಸಿತಕ್ಕೆ ಮನೆ ಹಾನಿಗೊಂಡ ಕುರಿತು ಅವರು ಕರೆಯಲ್ಲಿ ವಿವರಿಸಿದ್ದಾರೆ. ಈ ವಿಪತ್ತಿನ ಕುರಿತು ಮಾತನಾಡಿದ ಅವರು, ತಮ್ಮ ಮನೆಯಲ್ಲಿ ನೀರು ನುಗ್ಗಿದ್ದು, ಕಾರುಗಳು ಕೊಚ್ಚಿ ಹೋಗಿವೆ. ಮನೆಯಲ್ಲಿ ತಾವು ಐದರಿಂದ ಆರು ಮಂದಿ ಇದ್ದೇವೆ. ದುರಂತ ಸಂಭವಿಸುತ್ತಿದ್ದಂತೆ ಮನೆ ತೊರೆದು ತಕ್ಷಣಕ್ಕೆ ಅಲ್ಲಿನ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದಿದ್ದೇವೆ ಎಂದು ತಾವು ಕೆಲಸ ಮಾಡುತ್ತಿದ್ದ ಡಾ.ಮೂಪನ್ಸ್ ಮೆಡಿಕಲ್ ಕಾಲೇಜಿನ ಸಿಬ್ಬಂದಿಯೊಂದಿಗೆ ಸನ್ನಿವೇಶ ವಿವರಿಸಿದ್ದು, ಸಹಾಯದ ಭರವಸೆಯಲ್ಲಿರುವುದಾಗಿ ಹೇಳಿರುವುದು ದಾಖಲಾಗಿದೆ.
ಘಟನೆ ಕುರಿತು ಮಾಹಿತಿ ನೀಡಿದವರಲ್ಲಿ ಬಹುಶಃ ಇವರು ಮೊದಲಿಗರಾಗಿದ್ದು, ದುರದೃಷ್ಟವಶಾತ್ ಅವರ ಮೃತದೇಹ ಅವರು ತಿಳಿಸಿದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ. ಘಟನೆಯಿಂದ ಆಘಾತಕ್ಕೆ ಒಳಗಾದ ಇವರು ಗಾಬರಿಯಿಂದ ರಕ್ಷಣೆಗಾಗಿ ತಮಗೆ ತಿಳಿದವರಿಗೆಲ್ಲರಿಗೂ ಕರೆ ಮಾಡಿ, ಸಹಾಯ ಕೋರಿದ್ದರು.
ಡಾ.ಮೂಪನ್ಸ್ ಮೆಡಿಕಲ್ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವರು, ಅಲ್ಲಿನ ಡಿಜಿಎಂ ಡಾ.ಶನ್ವಾಸ್ ಪಲ್ಲಿಯಲ್ ಅವರಿಗೆ ಮೊದಲ ಕರೆ ಮಾಡಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಚೂರಲ್ಮಾಲ್ನಲ್ಲಿ ಭೂ ಕುಸಿತವಾಗಿದೆ. ನಾನು ಶಾಲೆ ಹಿಂದೆ ವಾಸವಾಗಿದ್ದು, ಯಾರನ್ನಾದರೂ ಸಹಾಯಕ್ಕೆ ಕಳಹಿಸಿಕೊಡಿ ಎಂದು ಮನವಿ ಮಾಡಿದ್ದಾರೆ.