ರಜೌರಿ (ಶ್ರೀನಗರ): ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಭದ್ರತಾ ಪಡೆಗಳು ಎರಡು ಕಡೆ ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಿದ್ದು, ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿರುವುದಾಗಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಕುಪ್ವಾರದ ಮಚಿಲ್ ಸೆಕ್ಟರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಹೊಡೆದುಹಾಕಿದ್ದು, ಕುಪ್ವಾರದ ತಂಗ್‌ಧರ್ ಸೆಕ್ಟರ್‌ನಲ್ಲಿ ಮತ್ತೊಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ. ಎರಡು ಎಕೆ ರೈಫಲ್ಸ್, ಒಂದು ಪಿಸ್ತೂಲ್, ನಾಲ್ಕು ಹ್ಯಾಂಡ್ ಗ್ರೆನೇಡ್‌ಗಳೊಂದಿಗೆ ಒಳನುಸುತ್ತಿದ್ದ ಭಯೋತ್ಪಾದಕರ ಕೃತ್ಯವನ್ನು ಸೇನೆ ತಡೆಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಬುಧವಾರ ಸಂಜೆ ಜಿಲ್ಲೆಯ ಎರಡು ಕಡೆ ಘರ್ಷಣೆ ನಡೆದಿತ್ತು. ನಿರ್ದಿಷ್ಟ ಗುಪ್ತಚರದ ಮೇರೆಗೆ, ಸೇನಾ ಪಡೆಗಳು ಮಚಿಲ್ ಸೆಕ್ಟರ್ ಪ್ರದೇಶದಲ್ಲಿ ಕಾರ್ಯಾಚರಣೆ ಪ್ರಾರಂಭಿಸಿತ್ತು. ಸಂಜೆ 7:40ರ ಸುಮಾರಿಗೆ, ಶಂಕಿತ ನುಸುಳುಕೋರರ ಚಲನವಲನವನ್ನು ಪತ್ತೆಹಚ್ಚಿದ್ದವು. ಇದು ಗುಂಡಿನ ಚಕಮಕಿಗೆ ಕಾರಣವಾಗಿತ್ತು.
ಗುರುವಾರ ಬೆಳಗ್ಗೆ ಮತ್ತೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಅಡಗಿ ಕುಳಿತಿರುವ ಭಯೋತ್ಪಾದಕರ ಸುಳಿವು ಸಿಕ್ಕಿದ್ದು, ಅವರ ಅನುಮಾನಾಸ್ಪದ ಚಲನವಲನದ ಬಗ್ಗೆ ಖಚಿತ ಮಾಹಿತಿ ಇದ್ದುದರಿಂದ ಆ ಪ್ರದೇಶದಲ್ಲಿ ಶೋಧ ಕಾರ್ಯವನ್ನು ಮುಂದುವರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸೋಮವಾರ ರಾತ್ರಿ, ರಜೌರಿ ಜಿಲ್ಲೆಯ ಮೀರಾ-ನಗ್ರೋಟಾ ಗ್ರಾಮದ ಮನೆಯೊಂದರ ಬಳಿ ಇಬ್ಬರು ಅಪರಿಚಿತ ವ್ಯಕ್ತಿಗಳನ್ನು ಗಮನಿಸಿದ ಗ್ರಾಮ ರಕ್ಷಣಾ ಸಿಬ್ಬಂದಿ (ವಿಡಿಜಿ) ಗುಂಪು ಗಾಳಿಯಲ್ಲಿ ಗುಂಡು ಹಾರಿಸಿತ್ತು. ಇದರ ಬೆನ್ನಲ್ಲೇ ಆ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಗ್‌ಧಾರ್ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದ ಕೆಲವೇ ಕ್ಷಣಗಳಲ್ಲಿ ರಜೌರಿ ಎನ್‌ಕೌಂಟರ್ ನಡೆದಿದೆ.
ಇನ್ನು, ಕುಮಕಾರ್ಡಿ ಮಚಲ್ ಸೆಕ್ಟರ್ ಜಿಲ್ಲೆಯ ಕುಪ್ವಾರದಲ್ಲಿ ಮತ್ತೊಂದು ಎನ್‌ಕೌಂಟರ್ ಆರಂಭವಾಗಿದೆ. ಈ ವೇಳೆ ಮೂವರು ಉಗ್ರನನ್ನು ಸೈನಿಕರು ಹೊಡೆದುರುಳಿಸಿದ್ದಾರೆ. ದಾಳಿಯಲ್ಲಿ ಮೂವರು ಹತರಾಗಿರುವುದನ್ನು ಸೇನೆ ದೃಢಪಡಿಸಬೇಕಿದೆ. ಮಚ್ಚಲ್ ಸೆಕ್ಟರ್‌ನ ಕಮ್ಕಾರಿ ಸಾಮಾನ್ಯ ಪ್ರದೇಶದ ಮೂಲಕ ಉಗ್ರಗಾಮಿಗಳ ಗುಂಪೊಂದು ಒಳನುಸುಳಲು ಯತ್ನಿಸಿದ ಬಗ್ಗೆ ಗುಪ್ತಚರ ಮಾಹಿತಿ ಬಂದಿತ್ತು. ಈ ಮಾಹಿತಿ ಆಧರಿಸಿ ಭಾರತೀಯ ಸೇನೆಯ 57 ರಾಷ್ಟ್ರೀಯ ರೈಫಲ್ಸ್ (RR) ಮತ್ತು 53 ಪದಾತಿ ದಳಗಳು ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಉಗ್ರರ ಒಳನುಸುಳಿವಿಕೆ ಪ್ರಯತ್ನವನ್ನು ವಿಫಲಗೊಳಿಸಲು ಸಂಘಟಿತ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸೇನಾ ಮೂಲಗಳು ಹೇಳಿವೆ.
ಜಮ್ಮು ಮತ್ತು ಕಾಶ್ಮೀರವು ಕಳೆದ ಕೆಲವು ತಿಂಗಳುಗಳಲ್ಲಿ ಉಗ್ರಗಾಮಿ ಚಟುವಟಿಕೆಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಜಮ್ಮು ಪ್ರದೇಶವು ಈಗ ಎನ್‌ಕೌಂಟರ್‌ಗಳ ಕೇಂದ್ರಬಿಂದುವಾಗಿದೆ. ಪಿರ್ ಪಂಜಾಲ್ ಪ್ರದೇಶದಲ್ಲಿ ಗುಂಡಿನ ಚಕಮಕಿಗಳಿಂದ ಸಶಸ್ತ್ರ ಪಡೆಗಳಲ್ಲಿ ಕೆಲ ಯೋಧರ ಸಾವುನೋವುಗಳು ವರದಿಯಾಗಿವೆ.
ಇದನ್ನು ಓದಿ:ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ: ಪೋಕ್ಸೋ ಪ್ರಕರಣ ದಾಖಲು - RAPE CASE