ತೆಂಕಶಿ(ತಮಿಳುನಾಡು):ವೃದ್ಧ ದಂಪತಿಯ ಸಮಯಪ್ರಜ್ಞೆಯಿಂದ ಭಾರಿ ದುರಂತವೊಂದು ತಪ್ಪಿದೆ. ರೈಲ್ವೆ ಹಳಿ ಮೇಲೆ ಲಾರಿ ಪಲ್ಟಿ ಆಗಿರುವುದನ್ನು ಗಮನಿಸಿದ ದಂಪತಿ, ಟಾರ್ಚ್ ಲೈಟ್ ತೋರಿಸುವ ಮೂಲಕ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಂಪತಿಯ ಮಹತ್ಕಾರ್ಯದಿಂದ ಸಂಭವಿಸಬಹುದಾದ ಅವಘಡವೊಂದು ತಪ್ಪಿದೆ. ಇವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆಯೂ ವ್ಯಕ್ತವಾಗುತ್ತಿದೆ.
ಲಾರಿ ಪಲ್ಟಿಯಾಗಿ ಚಾಲಕ ಸಾವು:ಕೇರಳದಿಂದ ತಮಿಳುನಾಡಿನ ತೂತುಕುಡಿಗೆ ಪ್ಲೈವುಡ್ ಲೋಡ್ ಹೊತ್ತ ಕಾರ್ಗೋ ಲಾರಿ ತಮಿಳುನಾಡು - ಕೇರಳ ಗಡಿಭಾಗದ ಎಸ್ ವೇಲವು ಪ್ರದೇಶದತ್ತ ಹೊರಟಿತ್ತು. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಹಳಿಗಳ ಮೇಲೆ ಪಲ್ಟಿ ಹೊಡೆದು ಅಪಘಾತ ಸಂಭವಿಸಿತ್ತು.
ಇದೇ ಸಂದರ್ಭದಲ್ಲಿ ತಿರುನಲ್ವೇಲಿಯಿಂದ ಕೇರಳದ ಪಾಲಕ್ಕಾಡ್ ಕಡೆಗೆ ರೈಲು ಬರುತ್ತಿತ್ತು. ಆಗ ಇದನ್ನು ಪುಳಿಯರೈನ ಷಣ್ಮುಗಯ್ಯ ಹಾಗೂ ಪತ್ನಿ ಕುರುಂತಮ್ಮಾಳ್ ಎಂಬ ದಂಪತಿ ಗಮನಿಸಿದ್ದಾರೆ. ತಕ್ಷಣ ಅವಘಡದ ಸಾಧ್ಯತೆ ಅರಿತು, ರೈಲನ್ನು ಸ್ವಲ್ಪ ದೂರದಲ್ಲೇ ನಿಲ್ಲಿಸಲು ಮುಂದೆ ಓಡಿ ಬಂದಿದ್ದಾರೆ. ಬಳಿಕ ಟಾರ್ಚ್ ಲೈಟ್‌ನೊಂದಿಗೆ ರೈಲಿನತ್ತ ಸಿಗ್ನಲ್ ತೋರಿಸಿದ್ದಾರೆ. ಇದನ್ನು ಗ್ರಹಿಸಿದ ಲೋಕೊ ಪೈಲಟ್ ಕೂಡಲೇ ರೈಲನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.