ಒಡಿಶಾ:ಆನ್‌ಲೈನ್ ಗೇಮ್‌ಗಳನ್ನು ನಿಷೇಧಿಸಬೇಕು ಎಂಬ ಕೂಗು ಕೇಳಿಬರುತ್ತಲೇ ಇರುತ್ತದೆ. ಕೆಲ ರಾಜ್ಯಗಳು ಈಗಾಗಲೇ ಹಲವು ಮಾರಕ ಜೂಜುಗಳನ್ನು ನಿಷೇಧಿಸಿವೆ. ಅವುಗಳು ಜೀವ, ಜೀವನವನ್ನೇ ಬಲಿ ಪಡೆಯುತ್ತಿರುವ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇಂಥದ್ದೇ ಒಂದು ಘಟನೆ ಒಡಿಶಾದಲ್ಲಿ ನಡೆದಿದೆ.
ಆನ್‌ಲೈನ್ ಗೇಮ್‌ನಲ್ಲಿ ಸೋತ ನಂತರ 24 ವರ್ಷದ ಯುವಕನೊಬ್ಬ ಬ್ಲೇಡ್‌ನಿಂದ ತನ್ನ ಕತ್ತನ್ನ ತಾನೇ ಸೀಳಿಕೊಂಡಿದ್ದಾನೆ. ತೀವ್ರ ರಕ್ತಸ್ರಾವವಾಗಿ ಆತ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಇಂತಹ ಅಚ್ಚರಿಯ, ಆಘಾತಕಾರಿ ಘಟನೆ ನಡೆದಿದ್ದು ಒಡಿಶಾದ ಜರ್ಪಾದ ಪೊಲೀಸ್ ಠಾಣೆ ವ್ಯಾಪ್ತಿಯ ಜೆರೆಂಗ್ ಗ್ರಾಮದಲ್ಲಿ. ಫೆಬ್ರವರಿ 16 ರಂದು ಸೌಮ್ಯ ರಂಜನ್ ನಾಯಕ್ ಎಂಬ ಯುವಕ ಆನ್‌ಲೈನ್ ಗೇಮ್‌ನಲ್ಲಿ ಸತತ ಸೋಲು ಕಂಡಿದ್ದಾನೆ. ಇದರಿಂದ ಸಾವಿರಾರು ರೂಪಾಯಿ ಕಳೆದುಕೊಂಡಿದ್ದಾನೆ. ಇದು ಆತನನ್ನು ಧೃತಿಗೆಡಿಸಿದ್ದು, ಸಾವಿನ ಅಂಚಿಗೆ ಕೊಂಡೊಯ್ದಿದೆ.
ಯುವಕನ ಸ್ಥಿತಿ ಗಂಭೀರ:ಸೋತ ಕಾರಣ ಹಣ ಕಳೆದುಕೊಂಡು ತೀವ್ರ ನೊಂದಿದ್ದ ರಂಜನ್ ಮನೆಯಲ್ಲಿದ್ದ ಹರಿತವಾದ ವಸ್ತುವಿನಿಂದ ತನ್ನ ಕತ್ತನ್ನು ತಾನೇ ಕೊಯ್ದುಕೊಂಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಕಂಡ ಪೋಷಕರು ತಕ್ಷಣವೇ ಆತನನ್ನು ಕಟಕನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡುತ್ತಿರುವ ವೈದ್ಯರು ಯುವಕನ ಜೀವದ ಬಗ್ಗೆ ಗ್ಯಾರಂಟಿ ನೀಡಿಲ್ಲ. ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.