ನವದೆಹಲಿ: ಪಶ್ಚಿಮ ದಿಲ್ಲಿಯ ಹಳೆ ರಾಜಿಂದರ್ ನಗರದ ಐಎಎಸ್ ಕೋಚಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಮೂವರು ಯುಪಿಎಸ್ಸಿ ಆಕಾಂಕ್ಷಿಗಳ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬವಾಗುತ್ತಿರುವುದಕ್ಕೆ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದೆ ಸ್ವಾತಿ ಮಲಿವಾಲ್ ರವಿವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಿಂದರ್ ನಗರದಲ್ಲಿ ನಡೆದಿರುವುದು ದುರಂತವಲ್ಲ, ಆ ಸಾವುಗಳನ್ನು ಕೊಲೆ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಘಟನೆ ನಡೆದು ಹಲವಾರು ಗಂಟೆಗಳ ನಂತರವೂ ದೆಹಲಿ ಸರ್ಕಾರದ ಯಾವುದೇ ಸಚಿವರು, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಅಥವಾ ಇತರ ಯಾವುದೇ ಅಧಿಕಾರಿ ಘಟನಾ ಸ್ಥಳಕ್ಕೆ ಬಂದಿಲ್ಲದ ಕಾರಣ ಸರ್ಕಾರಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಎಎಪಿ ಸಂಸದೆ ಮಲಿವಾಲ್ ಆಗ್ರಹಿಸಿದ್ದಾರೆ.
ಹಳೆ ರಾಜಿಂದರ್ ನಗರ ಕೋಚಿಂಗ್ ಸೆಂಟರ್ ಘಟನೆಯ ಬಗ್ಗೆ ಮಾತನಾಡಿದ ಸ್ವಾತಿ ಮಲಿವಾಲ್, "ಇಲ್ಲಿನ ವಿದ್ಯಾರ್ಥಿಗಳು ತುಂಬಾ ದುಃಖಿತರಾಗಿದ್ದಾರೆ ಮತ್ತು ಆಕ್ರೋಶಗೊಂಡಿದ್ದಾರೆ. 12 ಗಂಟೆಗಳಿಗಿಂತ ಹೆಚ್ಚು ಸಮಯ ಕಳೆದಿದೆ ಮತ್ತು ಇಲ್ಲಿಯವರೆಗೆ ದೆಹಲಿ ಸರ್ಕಾರದ ಯಾವುದೇ ಸಚಿವರು ಅಥವಾ ಎಂಸಿಡಿ ಮೇಯರ್ ಅಥವಾ ಯಾವುದೇ ಅಧಿಕಾರಿ ಇಲ್ಲಿಗೆ ಬಂದಿಲ್ಲ. ಈ ಸಾವುಗಳು ವಿಪತ್ತು ಅಲ್ಲ, ಇದು ಕೊಲೆ. ಈ ಎಲ್ಲಾ ದೊಡ್ಡ ಸರ್ಕಾರಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕು." ಎಂದು ಅವರು ಒತ್ತಾಯಿಸಿದರು.