ನವದೆಹಲಿ: ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ನೀಡಿರುವ ತನ್ನ ತೀರ್ಪಿನ ಬಗ್ಗೆ ವಿಮರ್ಶಾತ್ಮಕ ವಿಶ್ಲೇಷಣೆ ಸ್ವಾಗತಾರ್ಹ ಎಂದು ಸುಪ್ರೀಂ ಕೋರ್ಟ್ ಗುರುವಾರ ಸ್ಪಷ್ಟಪಡಿಸಿದೆ.
ದೆಹಲಿಯ ಅಬಕಾರಿ ನೀತಿ ಹಗರಣದಲ್ಲಿ ಮಾರ್ಚ್ 21ರಂದು ಬಂಧನಕ್ಕೆ ಒಳಗಾಗಿದ್ದ ಕೇಜ್ರಿವಾಲ್ ಅವರಿಗೆ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಮೇ 10ರಂದು ಮಧ್ಯಂತರ ಜಾಮೀನು ನೀಡಿದೆ. ಅಲ್ಲದೇ, ಜೂನ್ 2ರಂದು ಶರಣಾಗುವಂತೆ ಮತ್ತು ಮತ್ತೆ ಜೈಲಿಗೆ ಹೋಗಬೇಕೆಂದು ಕೇಜ್ರಿವಾಲ್ ಅವರಿಗೆ ಸೂಚಿಸಿದೆ. ಇದರ ವಿಚಾರವಾಗಿ ರಾಜಕೀಯ ಚರ್ಚೆ ನಡೆಯುತ್ತಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಇಂದು ವಿಚಾರಣೆ ನಡೆಯಿತು. ಈ ವೇಳೆ, ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಜ್ರಿವಾಲ್ ಪರ ವಕೀಲರು ಸಲ್ಲಿಸಿರುವ ಹಕ್ಕುಗಳು ಮತ್ತು ವಾದವನ್ನು ಪರಿಗಣಿಸಲು ನ್ಯಾಯ ಪೀಠ ನಿರಾಕರಿಸಿತು.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು, ''ನಾವು ಯಾರಿಗೂ ವಿನಾಯಿತಿ ನೀಡಿಲ್ಲ. ನಾವು ಅಂದುಕೊಂಡದ್ದು ಸಮರ್ಥನೀಯವಾಗಿದೆ ಎಂದು ನಮ್ಮ ಆದೇಶದಲ್ಲಿ ಹೇಳಿದ್ದೇವೆ'' ಎಂದು ಸ್ಪಷ್ಟಪಡಿಸಿತು. ಇಡಿ ಪರವಾಗಿ ವಾದ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಚುನಾವಣಾ ರ್‍ಯಾಲಿಗಳಲ್ಲಿ ಜನರು ಎಎಪಿಗೆ ಮತ ಹಾಕಿದರೆ, ನಾನು ಜೂನ್ 2ರಂದು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ ಎಂಬುದಾಗಿ ಕೇಜ್ರಿವಾಲ್ ಭಾಷಣ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನ್ಯಾಯ ಪೀಠ, ''ಇದು ಅವರ ಊಹೆ, ನಾವು ಏನನ್ನೂ ಹೇಳಲು ಸಾಧ್ಯವಿಲ್ಲ" ಎಂದು ಹೇಳಿತು. ಮುಂದುವರೆದು, ''ಅವರು ಯಾವಾಗ ಶರಣಾಗಬೇಕು ಎಂಬುದರ ಕುರಿತ ನಮ್ಮ ಆದೇಶವು ತುಂಬಾ ಸ್ಪಷ್ಟವಾಗಿದೆ. ಇದೇ ಸುಪ್ರೀಂ ಕೋರ್ಟ್‌ನ ಆದೇಶ. ಈ ಆದೇಶದಿಂದ ಕಾನೂನಿನ ನಿಯಮವನ್ನು ನಿಯಂತ್ರಿಸಲಾಗುತ್ತದೆ'' ಎಂದು ತಿಳಿಸಿತು.
ಈ ವೇಳೆ, ಕೇಜ್ರಿವಾಲ್ ತಮ್ಮ ಇಂತಹ ಸಮರ್ಥನೆಯಿಂದ ಜಾಮೀನು ಷರತ್ತನ್ನು ಉಲ್ಲಂಘಿಸಿದ್ದಾರೆ ಎಂದು ಮೆಹ್ತಾ ಆರೋಪಿಸಿದರು. ಅಲ್ಲದೇ, ಅವರು ಏನು ಸೂಚಿಸಲು ಹೊರಟಿದ್ದಾರೆ?, ಅದು ಇದು ಸಂಸ್ಥೆಗೆ ಕಪಾಳಮೋಕ್ಷ ಮಾಡಿದಂತೆ ಎಂದು ವಾದಿಸಿದರು. ಆಗ ನ್ಯಾಯಮೂರ್ತಿ ಖನ್ನಾ, ''ಜೂನ್ 2ರಂದು ಅವರು ಶರಣಾಗಬೇಕು ಎಂಬ ನ್ಯಾಯಾಲಯದ ಆದೇಶವು ಸ್ಪಷ್ಟವಾಗಿದೆ'' ಎಂದು ತಿಳಿಸಿದರು. ಜೊತೆಗೆ, ''ಪ್ರಕರಣದ ಕುರಿತು ಅವರು ಮಾತನಾಡುವಂತಿಲ್ಲ ಎಂದು ನಾವು ಆದೇಶದಲ್ಲಿ ಏನನ್ನೂ ಹೇಳಿಲ್ಲ'' ಎಂದು ನ್ಯಾಯ ಪೀಠ ಹೇಳಿತು.
ಮತ್ತೊಂದೆಡೆ, ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಗೃಹ ಸಚಿವ ಅಮಿತ್ ಶಾ ಹೆಸರನ್ನು ಉಲ್ಲೇಖಿಸದೆ, ಆಪ್ ನಾಯಕರಿಗೆ ನ್ಯಾಯಾಲಯವು ವಿಶೇಷ ಸೌಲಭ್ಯ ನೀಡಿದೆ ಎಂಬುವುದಾಗಿ ಹಲವರು ಭಾವಿಸಿದ್ದಾರೆ ಎಂದು ಹೇಳಿಕೆ ನೀಡಲಾಗುತ್ತಿದೆ ಎಂದು ನ್ಯಾಯ ಪೀಠದ ಗಮನಕ್ಕೆ ತಂದರು. ಆಗ ನ್ಯಾಯ ಪೀಠವು, ''ನಾವು ಆ ವಿಷಯಕ್ಕೆ ಹೋಗುವುದಿಲ್ಲ'' ಎಂದು ಸ್ಪಷ್ಟಪಡಿಸಿತು. ಇದೇ ವೇಳೆ, ಜನರು ತಮ್ಮ ಪಕ್ಷಕ್ಕೆ ಮತ ನೀಡದಿದ್ದರೆ ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ಕೇಜ್ರಿವಾಲ್ ಯಾವುದೇ ಹೇಳಿಕೆ ನೀಡಿಲ್ಲ. ಇದರ ಬಗ್ಗೆ ಬೇಕಾದರೆ ಅಫಿಡವಿಟ್ ಸಲ್ಲಿಸಲಾಗುವುದು ಎಂದು ಸಿಂಘ್ವಿ ಹೇಳಿದರು.
ಇದನ್ನೂ ಓದಿ:ನ್ಯೂಸ್ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಬಂಧನ ಅಸಿಂಧು; ತಕ್ಷಣ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ