ಭಾಗಲ್ಪುರ್ (ಬಿಹಾರ):ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಾವು ಅಧಿಕಾರದಲ್ಲಿ ಮುಂದುವರಿಯಬೇಕೆಂದೇ ಪ್ರಧಾನಿ ನರೇಂದ್ರ ಮೋದಿ ಅವರ ಪಾದಗಳನ್ನು ಮುಟ್ಟಿದ್ದಾರೆ ಎಂದು ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಆರೋಪಿಸಿದ್ದಾರೆ.
'ಜನ್ ಸುರಾಜ್' ಅಭಿಯಾನ ಕೈಗೊಂಡಿರುವ ಕಿಶೋರ್ ಕಿಶೋರ್ ಭಾಗಲ್ಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ, ''ಈ ಹಿಂದೆ ನಿತೀಶ್ ಕುಮಾರ್ ಅವರೊಂದಿಗೆ ಕೆಲಸ ಮಾಡಿದ ನಾನು ಈಗ ಏಕೆ ಟೀಕಿಸುತ್ತಿದ್ದೇನೆ ಎಂದು ಜನರು ನನ್ನನ್ನು ಕೇಳುತ್ತಾರೆ. ಅವರು (ನಿತೀಶ್) ಆಗ ವಿಭಿನ್ನ ವ್ಯಕ್ತಿಯಾಗಿದ್ದರು. ಅವರ ಆತ್ಮಸಾಕ್ಷಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ'' ಎಂದು ಕುಟುಕಿದರು.
''ರಾಜ್ಯದ ನಾಯಕ ಎಂದರೆ ಜನರ ಹೆಮ್ಮೆ. ಆದರೆ, ನಿತೀಶ್ ಕುಮಾರ್ ಅವರು ಮೋದಿ ಅವರ ಪಾದಗಳನ್ನು ಮುಟ್ಟುವ ಮೂಲಕ ಬಿಹಾರಕ್ಕೆ ಕಳಂಕ ತಂದಿದ್ದಾರೆ'' ಎಂದು ದೂರಿದರು. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಎನ್‌ಡಿಎ ಮೈತ್ರಿಕೂಟದಲ್ಲಿ ಪ್ರಧಾನಿ ಮೋದಿ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಲು ನಿತೀಶ್ ಕುಮಾರ್ ಮುಂದಾಗಿದ್ದನ್ನು ಉಲ್ಲೇಖಿಸಿ ಕಿಶೋರ್ ಈ ಹೇಳಿಕೆ ನೀಡಿದ್ದಾರೆ.
ಮುಂದುವರೆದು, ''ಮೋದಿ ಅಧಿಕಾರಕ್ಕೆ ಮರಳುವಲ್ಲಿ ನಿತೀಶ್ ಕುಮಾರ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ತುಂಬಾ ಮಾತನಾಡಲಾಗುತ್ತಿದೆ. ಆದರೆ, ಬಿಹಾರ ಸಿಎಂ ತಮ್ಮ ಸ್ಥಾನವನ್ನು ಹೇಗೆ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ?, ಅವರು ರಾಜ್ಯಕ್ಕೆ ಲಾಭವನ್ನು ಖಚಿತಪಡಿಸಿಕೊಳ್ಳಲು ತಮ್ಮ ಪ್ರಭಾವವನ್ನು ಬಳಸುತ್ತಿಲ್ಲ. 2025ರ ವಿಧಾನಸಭಾ ಚುನಾವಣೆಯ ನಂತರವೂ ಬಿಜೆಪಿ ಬೆಂಬಲದೊಂದಿಗೆ ಅಧಿಕಾರದಲ್ಲಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಅವರು ಪಾದಗಳನ್ನು ಮುಟ್ಟುತ್ತಿದ್ದಾರೆ'' ಎಂದು ದೂರಿದರು.
ಪ್ರಶಾಂತ್ ಕಿಶೋರ್ ಹಿನ್ನೆಲೆ:2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಪರವಾಗಿ ಪ್ರಶಾಂತ್ ಕಿಶೋರ್ ಕೆಲಸ ಮಾಡಿದ್ದರು. ಮೋದಿಯವರ ಚುನಾವಣಾ ಪ್ರಚಾರ ಕಾರ್ಯಗಳ ಹೊಣೆ ಹೊರುವ ಮೂಲಕ ಮೊದಲ ಬಾರಿಗೆ ಖ್ಯಾತಿಯನ್ನು ಗಳಿಸಿದ್ದರು. ಬಳಿಕ 2015ರಲ್ಲಿ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರ ಚುನಾವಣಾ ಪ್ರಚಾರದ ಜವಾಬ್ದಾರಿಯನ್ನೂ ಹೊತ್ತಿದ್ದರು. ಇದಾದ ಎರಡು ವರ್ಷಗಳ ನಂತರ ಔಪಚಾರಿಕವಾಗಿ ಪಕ್ಷಕ್ಕೂ ಸೇರಿದ್ದರು.
ಅಲ್ಲದೇ, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್ ಮತ್ತು ಜಗನ್ ಮೋಹನ್ ರೆಡ್ಡಿ ಸೇರಿದಂತೆ ಹಲವಾರು ರಾಜಕಾರಣಿಗಳ ಪರವಾಗಿಯೂ ಕೆಲಸ ಮಾಡಿದ್ದರು. 2021ರಿಂದ ರಾಜಕೀಯ ಸಲಹೆ ನೀಡುವುದನ್ನು ನಿಲ್ಲಿಸಿ, ತಮ್ಮದೇ ಆದ 'ಜನ್ ಸುರಾಜ್' ಸಂಘಟನೆ ಸ್ಥಾಪನೆ ಮಾಡಿದ್ದಾರೆ.
ಇದನ್ನೂ ಓದಿ:ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ ಪ್ರಶಾಂತ್ ಕಿಶೋರ್ ನೇಮಕವಾಗಿದ್ದಾರೆಯೇ?: ಪ್ಯಾಕ್ಟ್ ಚೆಕ್ ಇಲ್ಲಿದೆ... - Fact Check