ಹೈದರಾಬಾದ್: ಆಂಧ್ರಪ್ರದೇಶದ ಅಭಿವೃದ್ಧಿಗೆ ನಿರ್ಣಾಯಕವಾಗಿರುವ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಸಿಎಂ ಚಂದ್ರಬಾಬು ಅವರ ದೆಹಲಿ ಪ್ರವಾಸ ಫಲ ನೀಡಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಆಂಧ್ರಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಕೇಂದ್ರವು 400 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ ಎಂದು ಘೋಷಿಸಿದ್ದಾರೆ.
ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಆಂಧ್ರಪ್ರದೇಶದ 200.06 ಕಿಮೀ ಉದ್ದದ 13 ರಾಜ್ಯ ರಸ್ತೆಗಳ ಅಭಿವೃದ್ಧಿಗೆ ಕೇಂದ್ರೀಯ ರಸ್ತೆ ಮೂಲಸೌಕರ್ಯ ನಿಧಿಯಿಂದ (CRIF) 400 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. 98 ಕೋಟಿ ವೆಚ್ಚದಲ್ಲಿ ಗುಂಟೂರು - ನಲ್ಲಪಾಡು ರೈಲ್ವೆ ಮಾರ್ಗದಲ್ಲಿ 4 ಪಥದ ಆರ್‌ಒಬಿ ನಿರ್ಮಿಸಲು ಅನುಮೋದನೆ ನೀಡಲಾಗಿದೆ ಎಂದು ಪ್ರಕಟಿಸಲಾಗಿದೆ.
ಇತ್ತೀಚೆಗಷ್ಟೇ ಸಿಎಂ ಚಂದ್ರಬಾಬು ಕೇಂದ್ರ ಸಚಿವರ ಜತೆ ರಾಜ್ಯದ ಅಗತ್ಯತೆಗಳ ಕುರಿತು ಚರ್ಚೆ ನಡೆಸಿದ್ದಾರೆ. ಇದಕ್ಕಾಗಿ ನಿತಿನ್ ಗಡ್ಕರಿ ಅವರಿಗೆ ಸಿಎಂ ಚಂದ್ರಬಾಬು ಧನ್ಯವಾದ ತಿಳಿಸಿದ್ದಾರೆ. ಆಂಧ್ರಪ್ರದೇಶದ ಅಭಿವೃದ್ಧಿ ಮತ್ತು ಪ್ರಗತಿಗೆ ಹಂಚಿಕೆಗಳು ಹೆಚ್ಚು ಉಪಯುಕ್ತವಾಗುತ್ತವೆ ಎಂದು ಸಿಎಂ ಚಂದ್ರಬಾಬು ಭರವಸೆ ವ್ಯಕ್ತಪಡಿಸಿದರು.
ಇನ್ನೊಂದೆಡೆ ತೆಲಂಗಾಣಕ್ಕೂ ಹಣ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ 565 ರಲ್ಲಿ ನಲ್ಗೊಂಡ ಪಟ್ಟಣದ ಮೂಲಕ ಹಾದುಹೋಗುವ ನಕಿರೇಕಲ್-ನಾಗರ್ಜುನಸಾಗರ ಮಾರ್ಗದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು 516 ಕೋಟಿ ರೂಪಾಯಿ ವೆಚ್ಚದಲ್ಲಿ 14 ಕಿಮೀ ಉದ್ದದ 4 ಲೇನ್ ಬೈಪಾಸ್ ರಸ್ತೆಯನ್ನು ನಿರ್ಮಿಸಲಾಗುವುದು ಎಂದು ನಿತಿನ್ ಗಡ್ಕರಿ ಬಹಿರಂಗಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಅನುದಾನ ನೀಡಲಾಗಿದೆ ಎಂದು ಘೋಷಿಸಿದರು.
ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಸಂಪರ್ಕಿಸಲು ಈ ರಾಷ್ಟ್ರೀಯ ಹೆದ್ದಾರಿ ಅತ್ಯಂತ ಮಹತ್ವದ್ದಾಗಿದೆ ಎಂದು ಗಡ್ಕರಿ ಹೇಳಿದರು. ಈ ರಾಷ್ಟ್ರೀಯ ಹೆದ್ದಾರಿಯು ತೆಲಂಗಾಣದ ನಕಿರೇಕಲ್ ಜಂಕ್ಷನ್‌ನಿಂದ ಆರಂಭಗೊಂಡು ನಲ್ಗೊಂಡ ಜೊತೆಗೆ ಆಂಧ್ರಪ್ರದೇಶದ ಮಾಚರ್ಲಾ, ಎರ್ರಗೊಂಡಪಾಲೆಂ ಮತ್ತು ಕನಿಗಿರಿ ಮೂಲಕ ಹಾದು ಹೋಗುತ್ತದೆ ಎಂದು ವಿವರಿಸಲಾಯಿತು. ಸದ್ಯ ನಲ್ಗೊಂಡ ಭಾಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಹೊಸದಾಗಿ ಮಂಜೂರಾಗಿರುವ ಬೈಪಾಸ್ ರಸ್ತೆ ನಿರ್ಮಾಣದಿಂದ ನಲ್ಗೊಂಡ ಪಟ್ಟಣದ ಟ್ರಾಫಿಕ್ ಸಮಸ್ಯೆ ನೀಗಲಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.
ಅದೇ ರೀತಿ, ನಕಿರೇಕಲ್ ಮತ್ತು ನಾಗಾರ್ಜುನಸಾಗರ ನಡುವಿನ ಸಂಪರ್ಕವು ಸುಧಾರಿಸುತ್ತದೆ ಮತ್ತು ಸುರಕ್ಷಿತ ಪ್ರಯಾಣಕ್ಕೆ ಕೊಡುಗೆ ನೀಡುತ್ತದೆ ಎಂದು ಗಡ್ಕರಿ ಭರವಸೆ ವ್ಯಕ್ತಪಡಿಸಿದ್ದಾರೆ. ಬೈಪಾಸ್ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಿರುವುದು ಸಂತಸ ತಂದಿದೆ ಎಂದು ತೆಲಂಗಾಣ ರಾಜ್ಯದ ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ