ನವದೆಹಲಿ: ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಧ್ಯಾಹ್ನ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ.
ಹಣಕಾಸು ಸಚಿವಾಲಯ ಮತ್ತು ಮುಖ್ಯ ಆರ್ಥಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ಈ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಲಾಗಿದೆ. ಇದು ದೇಶದ ಆರ್ಥಿಕತೆಯ ವರದಿಯಾಗಿದ್ದು, ಬೆಳವಣಿಗೆಯ ದೃಷ್ಟಿಕೋನವನ್ನು ನೀಡುತ್ತದೆ.
ಮಧ್ಯಾಹ್ನ ಆರ್ಥಿಕ ಸಮೀಕ್ಷೆ ಮಂಡಿಸಿದ ಬಳಿಕ ಸಚಿವೆ ಸೀತಾರಾಮನ್, ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ.ಅನಂತ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹಣಕಾಸು ಸಚಿವಾಲಯ 'ಎಕ್ಸ್' ಪೋಸ್ಟ್ನಲ್ಲಿ ತಿಳಿಸಿದೆ.
ಸಾಮಾನ್ಯವಾಗಿ, ಆರ್ಥಿಕ ಸಮೀಕ್ಷೆ ಜನವರಿ 31ರಂದು ಹೊರಬರುತ್ತವೆ. ಇದನ್ನು ವಿತ್ತ ಸಚಿವರು ಕೇಂದ್ರ ಬಜೆಟ್ ಮುನ್ನಾ ದಿನ ಸದನದಲ್ಲಿ ಮಂಡಿಸುತ್ತಾರೆ. ಆದರೆ ಈ ಬಾರಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸಿದ್ದು, ಭಾರತೀಯ ಆರ್ಥಿಕತೆ ಒಂದು ವಿಮರ್ಶೆ ಎಂಬ ಶೀರ್ಷಿಕೆಯಡಿ ಕಿರು ವರದಿಯನ್ನು ಫೆಬ್ರವರಿಯಲ್ಲಿ ಮಂಡಿಸಿತ್ತು.
ಆರ್ಥಿಕ ಸಮೀಕ್ಷೆ ದೇಶದ ಆರ್ಥಿಕತೆಯ ವಿವಿಧ ವಲಯಗಳ ಅಂಕಿಅಂಶಗಳು, ವಿಶ್ಲೇಷಣೆ, ಸಂಶೋಧನೆ ಮತ್ತು ಶಿಫಾರಸುಗಳನ್ನು ಒಳಗೊಂಡಿರುತ್ತದೆ. ಹಾಗೆಯೇ ಉದ್ಯೋಗ, ಜಿಡಿಪಿ ಬೆಳವಣಿಗೆ, ಹಣದುಬ್ಬರ ಮತ್ತು ಬಜೆಟ್ ಕೊರತೆಯ ದತ್ತಾಂಶ ನೀಡುತ್ತದೆ. ಮುಂಬರುವ ಹಣಕಾಸು ವರ್ಷದ ನೀತಿಗಳು, ಹಂಚಿಕೆಗಳು ಮತ್ತು ಯೋಜನೆಗಳ ಅವಶ್ಯಕತೆಗಳನ್ನು ಪೂರೈಸುವ ಗುರಿಯನ್ನೂ ಇದು ಹೊಂದಿದೆ.
ಇನ್ನು, ಈ ಬಾರಿ ಬಜೆಟ್ನಲ್ಲಿ ಗ್ರಾಮೀಣ ಆರ್ಥಿಕತೆ, ಕಲ್ಯಾಣ ಯೋಜನೆಗಳು ಮತ್ತು ಕೃಷಿಗೆ ಹೆಚ್ಚಿನ ಹಂಚಿಕೆಯ ಮೂಲಕ ಪಿಎಂಎವೈ ಮತ್ತು ನರೇಗಾ ಯೋಜನೆಗಳಿಗೆ ಕೇಂದ್ರ ಸರ್ಕಾರ ಮಹತ್ವ ನೀಡಲಿದೆ ಎಂದು ರೇಟಿಂಗ್ ಏಜೆನ್ಸಿಯೊಂದು ತಿಳಿಸಿದೆ. (ಐಎಎನ್‌ಎಸ್)
ಇದನ್ನೂ ಓದಿ:ಹಿಂಸಾಚಾರ ಪೀಡಿತ ಬಾಂಗ್ಲಾದೇಶಿಯರಿಗೆ ಆಶ್ರಯ ನೀಡುವೆನೆಂದ ಸಿಎಂ ಮಮತಾ: ಬಿಜೆಪಿ ಕಿಡಿ - shelter to Bangladesh people