ನವದೆಹಲಿ:ಕೆನಡಾ ಮೂಲದ ಖಲಿಸ್ತಾನಿ ಭಯೋತ್ಪಾದಕ ಅರ್ಷದೀಪ್ ಸಿಂಗ್ ಮತ್ತು ಆತನ ಗ್ಯಾಂಗ್ ಪಂಜಾಬ್ ಮತ್ತು ದೆಹಲಿಯ ವಿವಿಧೆಡೆ ಸರಣಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಹೇಳಿದೆ. ಜೊತೆಗೆ ಈ ಗ್ಯಾಂಗ್ ಸ್ಲೀಪರ್ ಸೆಲ್ಗಳನ್ನು ಹೊಂದಿದ್ದು, ಜನರ ಹತ್ಯೆಗೂ ಯೋಜಿಸಿದೆ ಎಂದು ಎಚ್ಚರಿಕೆ ನೀಡಿದೆ.
ಭಯೋತ್ಪಾದನಾ ವಿರೋಧಿ ಏಜೆನ್ಸಿಯು, ದೇಶದ ಅನೇಕ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಖಲಿಸ್ತಾನಿ ಪರ ಭಯೋತ್ಪಾದಕರ ಜಾಲದ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದೆ. ಇದರಲ್ಲಿ ಕೆನಡಾದಲ್ಲಿರುವ ಅರ್ಷದೀಪ್ ಸಿಂಗ್ ಮತ್ತು ಆತನ ಮೂವರು ಭಾರತೀಯ ಏಜೆಂಟರಾದ ಹರ್ಜೀತ್ ಸಿಂಗ್ ಅಲಿಯಾಸ್ ಹ್ಯಾರಿ ಮೌರ್, ರವೀಂದರ್ ಸಿಂಗ್ ಅಲಿಯಾಸ್ ರಾಜ್ವಿಂದರ್ ಸಿಂಗ್, ರಾಜೀವ್ ಕುಮಾರ್ ಅಲಿಯಾಸ್ ಶೀಲಾ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಲಾಗಿದೆ.
ಪಂಜಾಬ್ ಮತ್ತು ದೆಹಲಿಯ ವಿವಿದೆಡೆ ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಂಚು ಮತ್ತು ಸ್ಲೀಪರ್ ಸೆಲ್ಗಳನ್ನು ಹೊಂದಿರುವ ಡಾಲಾ (ಅರ್ಷದೀಪ್ ಸಿಂಗ್) ಗ್ಯಾಂಗ್ ಅನ್ನು ಪತ್ತೆ ಮಾಡಿರುವುದು ಎನ್ಐಎ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ದೊಡ್ಡ ಯಶಸ್ಸು ಸಿಕ್ಕಂತಾಗಿದೆ ಎಂದು ಚಾರ್ಜ್ಶೀಟ್ನಲ್ಲಿ ಹೇಳಲಾಗಿದೆ.
ಎನ್ಐಎ ತನಿಖೆಯ ಪ್ರಕಾರ, ಉಗ್ರ ಡಾಲಾನ ಭಾರತೀಯ ಅನುಚರರಾದ ಖಲಿಸ್ತಾನ್ ಟೈಗರ್ ಫೋರ್ಸ್ನ(KTF) ಉಗ್ರರು ಆತನ ನಿರ್ದೇಶನದ ಮೇರೆಗೆ ದೇಶದಲ್ಲಿ ಭಯೋತ್ಪಾದಕ ಸಿಂಡಿಕೇಟ್ ನಡೆಸುತ್ತಿದ್ದರು. ಆರೋಪಿಗಳಾದ ಹ್ಯಾರಿ ಮೌರ್, ಹ್ಯಾರಿ ರಾಜ್‌ಪುರ ಸ್ಲೀಪರ್ ಸೆಲ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜೀವ್ ಕುಮಾರ್ ಇವರಿಗೆಲ್ಲಾ ಆಶ್ರಯ ನೀಡುತ್ತಿದ್ದ. ಮೂವರೂ ಡಾಲಾ ನಿರ್ದೇಶನದ ಮೇಲೆ ಮತ್ತು ಆತನು ಕಳುಹಿಸಿದ ಹಣದಿಂದ ಸರಣಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಯೋಜಿಸಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.
ಹ್ಯಾರಿ ಮೌರ್ ಮತ್ತು ಹ್ಯಾರಿ ರಾಜ್‌ಪುರ ಗ್ಯಾಂಗ್‌ನ ಶೂಟರ್‌ಗಳಾಗಿದ್ದಾರೆ. ಉದ್ದೇಶಿತ ಹತ್ಯೆಗಳನ್ನು ನಡೆಸಲು ಆದೇಶ ಬರುವವರೆಗೆ ರಾಜೀವ್ ಕುಮಾರ್ ಈ ಇಬ್ಬರನ್ನೂ ನೋಡಿಕೊಳ್ಳುತ್ತಿದ್ದ. ಅರ್ಷ್ ಡಾಲಾನ ಸೂಚನೆಯ ಮೇರೆಗೆ ರಾಜೀವ್ಕುಮಾರ್ ಇಬ್ಬರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದ ಎಂದು ತನಿಖೆಗಳು ಬಹಿರಂಗವಾಗಿದೆ.
ವಿಶೇಷವೆಂದರೆ, 2023 ರ ನವೆಂಬರ್ 23 ರಂದು ಹ್ಯಾರಿ ಮೌರ್, ಹ್ಯಾರಿ ರಾಜ್‌ಪುರ ಮತ್ತು 2024ರ ಜನವರಿ 12 ರಂದು ರಾಜೀವ್ಕುಮಾರ್ನನ್ನು ಎನ್ಐಎ ಬಂಧಿಸಿದೆ. ಇದರಿಂದ ಇಡೀ ಭಯೋತ್ಪಾದಕ ಗ್ಯಾಂಗ್ ದಾಳಿಯ ಸಂಚು ಹೊರಬಿದಿದ್ದೆ. ಈ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ಎನ್ಐಎ ತಿಳಿಸಿದೆ.
ಇದನ್ನೂ ಓದಿ:ಸೈಬರ್ ಕ್ರೈಂ: ಹೂಡಿಕೆ ವಂಚನೆಯ ವಿವಿಧ ಮೋಸಗಳಿವು: ಈ ಜಾಲದ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ಮಾಹಿತಿಗಳು ಇಲ್ಲಿವೆ - Investment Scams