ಕರ್ನಾಟಕ

karnataka

ETV Bharat / bharat

ಎಲ್ಲ ರೀತಿಯ ಮೀಸಲಾತಿಗೆ ನೆಹರು ವಿರುದ್ಧವಾಗಿದ್ದರು: ರಾಜ್ಯಸಭೆಯಲ್ಲಿ ಮೋದಿ - Nehru

ಕಾಂಗ್ರೆಸ್​ ಪಕ್ಷವು ದಲಿತರು, ಹಿಂದುಳಿದ ವರ್ಗಗಳು ಮತ್ತು ಆದಿವಾಸಿಗಳ ವಿರೋಧಿ ಎಂದು ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು. ಇದೇ ವೇಳೆ, ಜವಾಹರ್‌ಲಾಲ್ ನೆಹರು ಅವರು ಎಲ್ಲ ಬಗೆಯ ಮೀಸಲಾತಿಗಳನ್ನು ವಿರೋಧಿಸುತ್ತಿದ್ದರು ಎಂದರು.

pm-modi-replying-to-motion-of-thanks-on-presidents-address-in-rajya-sabha
ಎಲ್ಲ ರೀತಿಯ ಮೀಸಲಾತಿಗೆ ನೆಹರೂ ವಿರುದ್ಧವಾಗಿದ್ದರು: ರಾಜ್ಯಸಭೆಯಲ್ಲಿ ಮೋದಿ ಭಾಷಣ

By ETV Bharat Karnataka Team

Published : Feb 7, 2024, 3:44 PM IST

Updated : Feb 7, 2024, 4:35 PM IST

ನವದೆಹಲಿ:ದೇಶದ ಮೊದಲ ಪ್ರಧಾನಿ ಜವಾಹರ್​ಲಾಲ್​ ನೆಹರು ಎಲ್ಲ ರೀತಿಯ ಮೀಸಲಾತಿಗಳಿಗೆ ವಿರುದ್ಧವಾಗಿದ್ದರು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಅವರೇ ಸ್ವತಃ ಪತ್ರ ಬರೆದಿದ್ದರು. ಹೀಗಾಗಿ ಕಾಂಗ್ರೆಸ್ ಪಕ್ಷವು​ ದಲಿತರು, ಹಿಂದುಳಿದ ವರ್ಗಗಳು ಮತ್ತು ಆದಿವಾಸಿಗಳ ವಿರೋಧಿ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಇಂದು ಮಾತನಾಡಿದ ಪ್ರಧಾನಿ, ವಿಶೇಷವಾಗಿ ಉದ್ಯೋಗದಲ್ಲಿ ಮೀಸಲಾತಿಗೆ ನೆಹರು ವಿರುದ್ಧವಾಗಿದ್ದರು. ಇದು ಸರ್ಕಾರದ ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದಾಗಿ ಸ್ಪಷ್ಟವಾಗಿ ಉಲ್ಲೇಖಿಸಿದ್ದರು ಎಂದು ತಿಳಿಸಿದರು. 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಮೀಸಲಾತಿಯು ಶೇ.50ಕ್ಕಿಂತ ಮೀರಬಾರದು ಎಂಬ ಮಿತಿ ರದ್ದು ಮಾಡಿ, ಸಂಪೂರ್ಣ ಮೀಸಲಾತಿ ಒದಗಿಸಲಾಗುತ್ತದೆ ಎಂದು ಪಕ್ಷದ ರಾಹುಲ್​ ಗಾಂಧಿ ಹೇಳಿರುವ ಬೆನ್ನಲ್ಲೇ ಮೋದಿ ಮೀಸಲಾತಿ ಬಗ್ಗೆ ನೆಹರು ಹೊಂದಿದ್ದ ನಿಲುವನ್ನು ಮುನ್ನಲೆಗೆ ತಂದಿದ್ದಾರೆ.

ಇದೇ ವೇಳೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ ವಿಶೇಷ ವಿಧಿ 370 ರದ್ದು ಮಾಡಿದ ಬಳಿಕವೇ ಅಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳು ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿದೆ ಎಂದರು. ಮುಂದುವರೆದು ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕಾಗಿ​ ಪ್ರಜಾಪ್ರಭುತ್ವದ ಕತ್ತನ್ನೇ ಹಿಸುಕಿರುವ ಪಕ್ಷ. ಪ್ರಜಾಸತ್ಮಾಕವಾಗಿ ಆಯ್ಕೆಯಾಗಿದ್ದ ಸರ್ಕಾರಗಳನ್ನು ವಜಾಗೊಳಿಸಿತ್ತು. ಡಾ.ಬಿ.ಆರ್​.ಅಂಬೇಡ್ಕರ್​ ವಿಚಾರಗಳನ್ನು ನಾಶ ಮಾಡುವ ಯಾವುದೇ ಅವಕಾಶವನ್ನು ಕಾಂಗ್ರೆಸ್​ ಬಿಟ್ಟಿಲ್ಲ. ಬಾಬಾಸಾಹೇಬ್​ ಅವರು 'ಭಾರತ ರತ್ನ' ಪ್ರಶಸ್ತಿಗೆ ಅರ್ಹರಲ್ಲ ಎಂದು ಕಾಂಗ್ರೆಸ್‌ ನಾಯಕರು ಭಾವಿಸಿದ್ದರು. ಹಿಂದುಳಿದ ವರ್ಗದ ಸೀತಾರಾಮ ಕೇಸರಿ ಅವರನ್ನು ಹೊರಹಾಕಿದ್ದರು. ಎನ್​ಡಿಎ ಸರ್ಕಾರವು ಮೊದಲ ಬಾರಿಗೆ ಆದಿವಾಸಿ ಹೆಣ್ಣು ಮಗಳನ್ನು ರಾಷ್ಟ್ರಪತಿ ಮಾಡಿತು. ಆದರೆ, ರಾಷ್ಟ್ರಪತಿ ಅವರನ್ನೂ ಅವಮಾನಿಸಲಾಗುತ್ತಿದೆ ಎಂದು ಟೀಕಾಪ್ರಹಾರ ಮಾಡಿದರು.

ಕಾಂಗ್ರೆಸ್​ ಅವಧಿ ಮುಗಿದಿದೆ-ಮೋದಿ:ಕಾಂಗ್ರೆಸ್‌ ಪಕ್ಷದ ಅವಧಿ ಮುಗಿದಿದೆ. ಅದರ ಚಿಂತನೆಯೂ ಹಳೆಯದಾಗಿದೆ. ಈಗ ತನ್ನ ಕೆಲಸವನ್ನು ಹೊರಗುತ್ತಿಗೆ ನೀಡಿದೆ. ಪಕ್ಷದ ಇಂತಹ ಅವನತಿಯಿಂದ ನಮಗೆ ಯಾವುದೇ ಖುಷಿ ಆಗುತ್ತಿಲ್ಲ. ಆ ಪಕ್ಷದ ಬಗ್ಗೆ ನಾವು ಸಹಾನುಭೂತಿ ವ್ಯಕ್ತಪಡಿಸುತ್ತೇವೆ ಎಂದು ಮೋದಿ ಕುಟುಕಿದರು.

ವಿಜಭನೆಯ ಮಾತಿಗೆ ಪ್ರಧಾನಿ ಕಿಡಿ:ಇದೇ ಸಂದರ್ಭದಲ್ಲಿ ದೇಶ ವಿಭಜನೆಯಂತಹ ಸನ್ನಿವೇಶವನ್ನು ಸೃಷ್ಟಿಸಿದ್ದು ಕಾಂಗ್ರೆಸ್. ಇಂತಹದ್ದೇ ಮಾತುಗಳ ಮೂಲಕ ದಕ್ಷಿಣ ಮತ್ತು ಉತ್ತರ ಎಂದು ವಿಭಜನೆಗೆ ಮುಂದಾಗಿದೆ. ಅಲ್ಲದೇ, ದೇಶದ ಸಾಕಷ್ಟು ಭೂಮಿಯನ್ನು ಶತ್ರು ರಾಷ್ಟ್ರಕ್ಕೆ ಬಿಟ್ಟುಕೊಟ್ಟ ಪಕ್ಷ ಈಗ ಆಂತರಿಕ ಭದ್ರತೆಯ ಬಗ್ಗೆ ನಮಗೆ ಉಪದೇಶ ನೀಡುತ್ತಿದೆ ಎಂದು ಪ್ರಧಾನಿ ಕಿಡಿಕಾರಿದರು.

ಕಾಂಗ್ರೆಸ್​ಗೆ ತನ್ನ ಮೇಲೆಯೇ ಗ್ಯಾರಂಟಿ ಇಲ್ಲ: ಕಾಂಗ್ರೆಸ್​ ಪಕ್ಷದ ತನ್ನದೇ ಪಕ್ಷದ ನಾಯಕರು ಮತ್ತು ನೀತಿಗಳ ಮೇಲೆ ಗ್ಯಾರಂಟಿ ಹೊಂದಿಲ್ಲ. ಈಗ ಮೋದಿ ಗ್ಯಾರಂಟಿ ಬಗ್ಗೆ ಪ್ರಶ್ನೆ ಮಾಡುತ್ತಿದೆ ಎಂದು ಅವರು ಲೇವಡಿ ಮಾಡಿದರು. ಇದೇ ವೇಳೆ, ದೇಶದ ಯಾವ ಸಮಸ್ಯೆಗಳನ್ನು ಎದುರಿಸಿತ್ತು ಎಂದು ಕಾಂಗ್ರೆಸ್​ಗೆ ಗೊತ್ತಿತ್ತು. ಆದರೆ, ಅವುಗಳನ್ನು ಪರಿಹರಿಸಲು ಏನೂ ಮಾಡಿಲ್ಲ. ಆದರೆ, ಈಗ ನಾವು ಕಷ್ಟದ ಸಮಯದಿಂದ ಹೊರಬಂದಿದ್ದೇವೆ. ದೇಶವನ್ನು ಅದರ ಸಮಸ್ಯೆಗಳಿಂದ ಮುಕ್ತಗೊಳಿಸಿದ್ದೇವೆ ಎಂದು ಮೋದಿ ಹೇಳಿದರು.

ಇದನ್ನೂ ಓದಿ:ಪ್ರಧಾನಿ ಆದೇಶದ ಮೇಲೆ ನವೀನ್ ಪಟ್ನಾಯಕ್ ನಮ್ಮ ಮೇಲೆ ವಾಗ್ದಾಳಿ ಮಾಡಿದ್ದಾರೆ: ರಾಹುಲ್ ಗಾಂಧಿ ಆರೋಪ

Last Updated : Feb 7, 2024, 4:35 PM IST

ABOUT THE AUTHOR

...view details