ಕರ್ನಾಟಕ

karnataka

ನೀಟ್-ಯುಜಿ ವಿವಾದ: ಕೌನ್ಸೆಲಿಂಗ್ ಪ್ರಕ್ರಿಯೆ ಮುಂದೂಡಲು ಸುಪ್ರೀಂ ಕೋರ್ಟ್ ನಕಾರ - NEET UG 2024

By ETV Bharat Karnataka Team

Published : Jun 21, 2024, 6:46 PM IST

ಜುಲೈ 6ರಿಂದ ನಡೆಯಲಿರುವ ನೀಟ್​ ಕೌನ್ಸೆಲಿಂಗ್​ ಪ್ರಕ್ರಿಯೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

SUPREME COURT
ಸುಪ್ರೀಂ ಕೋರ್ಟ್ (ANI)

ನವದೆಹಲಿ:ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ನೀಟ್​-ಯುಜಿ 2024ರ ಕೌನ್ಸೆಲಿಂಗ್ ಮುಂದೂಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿತು. ಮೇ 5ರಂದು ನಡೆದ ಪರೀಕ್ಷೆಯ ರದ್ಧತಿ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಕೇಂದ್ರ ಸರ್ಕಾರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.

2024ರ ನೀಟ್​ ಪರೀಕ್ಷೆಯಲ್ಲಿನ ಅಕ್ರಮಗಳ ಆರೋಪ ಕುರಿತು ಕೋರ್ಟ್​ಗೆ ಅನೇಕ ಅರ್ಜಿಗಳು ಸಲ್ಲಿಕೆಯಾಗಿವೆ. ಇಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ರಜಾಕಾಲದ ಪೀಠ, ವಿಚಾರಣೆಗೆ ಬಾಕಿ ಉಳಿದಿರುವ ಇತರ ಅರ್ಜಿಗಳ ಜೊತೆಗೆ ಅಕ್ರಮದ ಕುರಿತ ಅರ್ಜಿಗಳ ವಿಚಾರಣೆಯನ್ನೂ ಜುಲೈ 8ರಂದು ಮುಂದೂಡಿತು.

ಜುಲೈ 6ರಿಂದ ನೀಟ್​ ಕೌನ್ಸೆಲಿಂಗ್​ ನಡೆಸಲು ಉದ್ದೇಶಿಸಲಾಗಿದೆ. ಜುಲೈ 8ರಂದು ಸುಪ್ರೀಂ ಕೋರ್ಟ್ ಈ ಎಲ್ಲ ಅರ್ಜಿಗಳ ವಿಚಾರಣೆಯನ್ನು ನಿಗದಿಪಡಿಸಿರುವುದರಿಂದ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಎರಡು ದಿನಗಳವರೆಗೆ ಮುಂದೂಡುವಂತೆ ಅರ್ಜಿದಾರರ ಪರ ವಕೀಲರು ಒತ್ತಾಯಿಸಿದರು.

''ನಾವು ಕೌನ್ಸೆಲಿಂಗ್‌ಗೆ ಯಾವುದೇ ತಡೆ ಕೋರುವುದಿಲ್ಲ. ಪರೀಕ್ಷೆಯ ಮುಖ್ಯ ವಿಚಾರಣೆಯನ್ನು ಜುಲೈ 8ಕ್ಕೆ ಪಟ್ಟಿ ಮಾಡಿರುವುದರಿಂದ ಜುಲೈ 6ರಂದು ನಡೆಯಲಿರುವ ಕೌನ್ಸೆಲಿಂಗ್​ ಅನ್ನು ಎರಡು ದಿನ ಮಾತ್ರ ನಿಲ್ಲಿಸಲು ಕೋರುತ್ತೇವೆ'' ಎಂದು ವಕೀಲರು ಹೇಳಿದರು. ಆಗ ನ್ಯಾಯ ಪೀಠವು, ''ನಾವು ಇದೇ ಹೇಳಿಕೆಯನ್ನು ಕೇಳುತ್ತಿದ್ದೇವೆ. ನಿಮಗೆ ಅಡ್ಡಿಪಡಿಸುವುದಕ್ಕಾಗಿ ಅನ್ಯಥಾ ಭಾವಿಸಬೇಡಿ. ಕೌನ್ಸೆಲಿಂಗ್ ಎಂದರೆ ತೆರೆದು, ಮುಚ್ಚುವುದು ಎಂದಲ್ಲ. ಇದೊಂದು ಪ್ರಕ್ರಿಯೆ. ಜುಲೈ 6ರಂದು ಆ ಪ್ರಕ್ರಿಯೆ ಪ್ರಾರಂಭವಾಗುತ್ತದೆ'' ಎಂದು ತಿಳಿಸಿತು.

ಹೀಗೆ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಮುಂದೂಡಲು ನಿರಾಕರಿಸಿದ ನ್ಯಾಯ ಪೀಠವು, ಎನ್‌ಟಿಎ, ಕೇಂದ್ರ ಮತ್ತು ಇತರ ಪ್ರತಿವಾದಿಗಳ ಪರವಾಗಿ ಹಾಜರಾಗುವ ವಕೀಲರು ಎರಡು ವಾರಗಳಲ್ಲಿ ತಮ್ಮ ಪ್ರತಿಕ್ರಿಯೆ ಸಲ್ಲಿಸಬೇಕೆಂದು ಸೂಚಿಸಿ ನೋಟಿಸ್​ ಜಾರಿ ಮಾಡಿತು.

1,563 ವಿದ್ಯಾರ್ಥಿಗಳ ಮರು ಪರೀಕ್ಷೆ ತಡೆಯಲು ನಕಾರ: ಇದೇ ವೇಳೆ, ನೀಟ್​ ಪರೀಕ್ಷೆ ಬರೆದ 1,563 ವಿದ್ಯಾರ್ಥಿಗಳಿಗೆ ಈ ಹಿಂದೆ ಕೃಪಾಂಕಗಳನ್ನು ಎನ್‌ಟಿಎ ನೀಡಿತ್ತು. ನಂತರದಲ್ಲಿ ಕೃಪಾಂಕ ನೀಡುವ ನಿರ್ಧಾರ ಕೈಬಿಡಲಾಗಿದೆ ಮತ್ತು ಅಂತಹ ವಿದ್ಯಾರ್ಥಿಗಳಿಗೆ ಜೂನ್​ 23ರಂದು ಮರು ಪರೀಕ್ಷೆಯನ್ನು ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್​ಗೆ ಇನ್​ಟಿಎ ತಿಳಿಸಿತ್ತು.

ಇಂದಿನ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಜೂನ್ 23ರಂದು ಮರು ಪರೀಕ್ಷೆ ನಡೆಸಲಿರುವ ವಿಷಯವನ್ನೂ ಪ್ರಸ್ತಾಪಿಸಿದರು. ಹೊಸದಾಗಿ ಪರೀಕ್ಷೆಯಿಂದ ಅಭ್ಯರ್ಥಿಗಳು ಒತ್ತಡಕ್ಕೆ ಒಳಗಾಗುತ್ತಾರೆ ಎಂದು ವಕೀಲರು ಹೇಳಿದರು. ಇದಕ್ಕೆ ನ್ಯಾಯ ಪೀಠವು, ''ಅನುತ್ತೀರ್ಣರಾದ ಕೆಲವು ಅಭ್ಯರ್ಥಿಗಳಿಗೆ ಮರುಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತಿದೆ ಎಂಬುದು ನಿಮ್ಮ ವಾದವೇ?. ಅಥವಾ, ನೀವು ಎರಡನೇ ಪರೀಕ್ಷೆಗೆ ಹಾಜರಾಗುವವರು ಒತ್ತಡಕ್ಕೆ ಸಿಲುಕುತ್ತಾರೆ ಎಂದು ಹೇಳುತ್ತಿದ್ದೀರಾ?, ಈ ಎರಡು ವಾದಗಳು ಸಂಪೂರ್ಣವಾಗಿ ವ್ಯತಿರಿಕ್ತವಾಗಿವೆ'' ಎಂದು ವಕೀಲರಿಗೆ ಹೇಳಿ, 1,563 ವಿದ್ಯಾರ್ಥಿಗಳ ಮರು ಪರೀಕ್ಷೆಗೆ ತಡೆಯಲು ನಿರಾಕರಿಸಿತು.

ಇದನ್ನೂ ಓದಿ:ಬಿಹಾರದಲ್ಲಿ 'ನೀಟ್​' ಕಿಂಗ್​ಪಿನ್, ಪರೀಕ್ಷಾರ್ಥಿಗಳು ಸೇರಿ ಹಲವರ ಬಂಧನ: ₹32 ಲಕ್ಷಕ್ಕೆ ಡೀಲ್​

ABOUT THE AUTHOR

...view details