ಕರ್ನಾಟಕ

karnataka

ETV Bharat / bharat

ವಿಶ್ವಾಸಮತ ಗೆದ್ದ ಹರಿಯಾಣದ ನೂತನ ಸಿಎಂ ಸೈನಿ: ಶಾಸಕ ಸ್ಥಾನಕ್ಕೆ ಖಟ್ಟರ್ ರಾಜೀನಾಮೆ ಘೋಷಣೆ - Haryana Govt Wins Trust Vote

ಹರಿಯಾಣದ ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಸರ್ಕಾರ ವಿಶ್ವಾಸಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದೆ.

Nayab Singh Saini Govt Wins Trust Vote In Haryana Assembly
ವಿಶ್ವಾಸಮತ ಗೆದ್ದ ಹರಿಯಾಣದ ನೂತನ ಸಿಎಂ ಸೈನಿ

By ETV Bharat Karnataka Team

Published : Mar 13, 2024, 4:07 PM IST

ಚಂಡೀಗಢ (ಹರಿಯಾಣ): ಹರಿಯಾಣದ ನೂತನ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ರಾಜ್ಯ ವಿಧಾನಸಭೆಯಲ್ಲಿ ಇಂದು ತಮ್ಮ ಸರ್ಕಾರದ ವಿಶ್ವಾಸಮತ ಸಾಬೀತು ಪಡಿಸಿದ್ದಾರೆ. ವಿಶೇಷ ಅಧಿವೇಶನದಲ್ಲಿ ವಿಶ್ವಾಸ ಮತ ಪ್ರಸ್ತಾವನೆ ಮೇಲೆ ಎರಡು ಗಂಟೆಗಳ ಕಾಲ ಚರ್ಚೆ ನಡೆಯಿತು. ಬಳಿಕ ಜರುಗಿದ ಧ್ವನಿ ಮತದಲ್ಲಿ ವಿಶ್ವಾಸಮತವನ್ನು ಹೊಸ ಸರ್ಕಾರ ಸಾಬೀತು ಪಡಿಸಿತು.

ಲೋಕಸಭೆ ಚುನಾವಣೆಯ ಸೀಟು ಹಂಚಿಕೆ ಸಂಬಂಧ ಮಂಗಳವಾರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಬಿಜೆಪಿ - ಜೆಜೆಪಿ ಮೈತ್ರಿ ಮುರಿದು ಬಿದ್ದಿತ್ತು. ಇದರ ನಡುವೆ ಸಿಎಂ ಮನೋಹರ್ ​ಲಾಲ್​ ಖಟ್ಟರ್ ಮತ್ತು ಸಂಪುಟದ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಇದಾದ ಕೆಲ ಹೊತ್ತಿನಲ್ಲಿ ನೂತನ ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಅವರನ್ನು ಬಿಜೆಪಿ ಆಯ್ಕೆ ಮಾಡಿತ್ತು. ಅಲ್ಲದೇ, ಸಂಜೆ ವೇಳೆಗೆ ರಾಜ್ಯಪಾಲರು ಸಿಎಂ ಸೈನಿ ಅವರೊಂದಿಗೆ ಐವರು ಸಚಿವರಿಗೆ ಪ್ರಮಾಣವಚನ ಬೋಧಿಸಿದರು.

ಇಂದು ವಿಧಾನಸಭೆಯಲ್ಲಿ ನಯಾಬ್ ಸಿಂಗ್ ಸೈನಿ ತಮ್ಮ ಸರ್ಕಾರದ ವಿಶ್ವಾಸ ಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 90 ಸದಸ್ಯರ ಬಲದ ವಿಧಾನಸಭೆಯಲ್ಲಿ ಬಿಜೆಪಿ 41 ಶಾಸಕರನ್ನು ಹೊಂದಿದೆ. ಜೊತೆಗೆ ಏಳು ಪಕ್ಷೇತರ ಶಾಸಕರ ಪೈಕಿ ಆರು ಜನ ಮತ್ತು ಹರಿಯಾಣದ ಲೋಖಿತ್ ಪಕ್ಷದ ಶಾಸಕ ಗೋಪಾಲ್ ಕಾಂಡ ಅವರ ಬೆಂಬಲವನ್ನು ಸರ್ಕಾರ ಹೊಂದಿದೆ.

ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ 30 ಶಾಸಕರನ್ನು ಹೊಂದಿದ್ದರೆ, ಭಾರತೀಯ ರಾಷ್ಟ್ರೀಯ ಲೋಕದಳದ ಏಕೈಕ ಶಾಸಕ ಸಹ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿದ್ದಾರೆ. ಮತ್ತೊಂದೆಡೆ, ಜನನಾಯಕ ಜನತಾ ಪಕ್ಷ (ಜೆಜೆಪಿ) 10 ಶಾಸಕರನ್ನು ಹೊಂದಿದೆ. ಇಂದು ವಿಶ್ವಾಸ ಮತಯಾಚನೆಯ ವೇಳೆ ಸದನಕ್ಕೆ ಗೈರು ಹಾಜರಾಗುವಂತೆ ತನ್ನ 10 ಶಾಸಕರಿಗೆ ವಿಪ್ ಜಾರಿ ಮಾಡಿತ್ತು. ವಿಶ್ವಾಸಮತದ ವಿಷಯ ಕೈಗೆತ್ತಿಕೊಂಡಾಗ ಐವರು ಶಾಸಕರು ಸದನದಿಂದ ನಿರ್ಗಮಿಸಿದರು.

ಶಾಸಕ ಸ್ಥಾನಕ್ಕೆ ಖಟ್ಟರ್ ರಾಜೀನಾಮೆ:ವಿಧಾನಸಭೆಯಲ್ಲಿ ನಯಾಬ್ ಸಿಂಗ್ ಸೈನಿ ಸರ್ಕಾರ ವಿಶ್ವಾಸಮತ ಸಾಬೀತು ಪಡಿಸಿದ ಬೆನ್ನಲ್ಲೇ ಮಾಜಿ ಮಾಜಿ ಮುಖ್ಯಮಂತ್ರಿ ಮನೋಹರ್ ​ಲಾಲ್​ ಖಟ್ಟರ್ ರಾಜ್ಯ ವಿಧಾನಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಖಟ್ಟರ್ ಸ್ಪರ್ಧಿಸಬಹುದು ಎಂಬ ಊಹಾಪೋಹಗಳು ಇವೆ.

ಕರ್ನಾಲ್ ಕ್ಷೇತ್ರವನ್ನು ಪ್ರತಿನಿಧಿಸಿರುವ ಖಟ್ಟರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿ, ನನ್ನ ಕ್ಷೇತ್ರವನ್ನು ಹೊಸದಾಗಿ ನೇಮಕಗೊಂಡ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೋಡಿಕೊಳ್ಳುತ್ತಾರೆ. ಕಳೆದ ಒಂಬತ್ತೂವರೆ ವರ್ಷಗಳಲ್ಲಿ ನಾನು ಸಭಾನಾಯಕನಾಗಿ ಕೆಲಸ ಮಾಡಿದ್ದೇನೆ. ನನ್ನ ಕೊನೆಯುಸಿರು ಇರುವವರೆಗೂ ಹರಿಯಾಣದ ಜನರ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ:ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ಮಸೂದೆಗೆ ರಾಷ್ಟ್ರಪತಿ ಅಂಕಿತ: ಕಾನೂನಿನಲ್ಲಿರುವ ಅಂಶಗಳೇನು?

ABOUT THE AUTHOR

...view details