ದಂತೇವಾಡ(ಛತ್ತೀಸ್‌ಗಢ): ಹರಿತ ಆಯುಧದಿಂದ ತಡರಾತ್ರಿ ಮನೆಗೆ ನುಗ್ಗಿದ ಮುಸುಕುಧಾರಿ ನಕ್ಸಲರು, ಸ್ಥಳೀಯ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯನ್ನು ಕುಟುಂಬಸ್ಥರೆದುರೇ ಕೊಚ್ಚಿ ಕೊಲೆಗೈದ ಘಟನೆ ದಾಂತೇವಾಡ ಜಿಲ್ಲೆಯ ನಕ್ಸಲ್‌ಪೀಡಿತ ಪ್ರದೇಶ ಅರನ್ಪುರ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಜೋಗ ಬರ್ಸಾ ಕೊಲೆಯಾದವರು. ಗುರುವಾರ ತಡರಾತ್ರಿ ಮನೆಗೆ ನುಗ್ಗಿದ 7-8 ಜನರಿದ್ದ ನಕ್ಸಲರು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಜೋಗ ಬರ್ಸಾ ಅರನ್ಪುರ ಪಂಚಾಯತ್ ಚುನಾವಣೆಯಲ್ಲಿ ಸರ್ಪಂಚ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಕೊಡಲಿಯಿಂದ ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿದ ಮುಸುಕುಧಾರಿಗಳು, ಜೋಗ ಅವರ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ನಾವು ಅವರ ಮೇಲೆ ಹಲ್ಲೆ ಮಾಡದಂತೆ ಕೇಳಿಕೊಂಡರೂ ಯಾರ ಮಾತನ್ನೂ ಕೇಳದೇ ಕೊಲೆ ಮಾಡಿದರು ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ. ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ದಂತೇವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರಾಯ್ ಮಾಹಿತಿ ನೀಡಿದರು.
ಜೋಗ ಅವರ ಪತ್ನಿ ಈ ಮುನ್ನ ಅರನ್ಪುರದ ಸರಪಂಚ್ ಆಗಿದ್ದರು. ಆದರೆ, ಪುರುಷರ ಕ್ಷೇತ್ರವಾಗಿ ವಿಂಗಡಣೆಯಾಗಿದ್ದರಿಂದ ಜೋಗ ಅವರೇ ಸರ್ಪಂಚ್ ಹುದ್ದೆಗೆ ಸ್ಪರ್ಧಿಸಿದ್ದರು. ಇವರ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿತ್ತು. ಚುನಾವಣೆಗೆ ನಿಲ್ಲದಂತೆ ನಕ್ಸಲರು ಬೆದರಿಕೆ ಹಾಕಿದ್ದರು. ಈ ಬೆದರಿಕೆಯ ಹೊರತಾಗಿಯೂ ಸ್ಪರ್ಧಿಸಿದ್ದರು.
ದಂತೇವಾಡ ಜಿಲ್ಲೆ ಸೇರಿದಂತೆ ಛತ್ತೀಸ್‌ಗಢದಲ್ಲಿ ಪಂಚಾಯತ್ ಚುನಾವಣೆ ಘೋಷಣೆಯಾಗಿದೆ. ಫೆಬ್ರವರಿ 17, 20 ಮತ್ತು 23ರಂದು ಮೂರು ತಂತದಲ್ಲಿ ಮತದಾನ ನಡೆಯಲಿದೆ. ಬಸ್ತಾರ್ ವ್ಯಾಪ್ತಿಯಲ್ಲಿ ಆಗಾಗ ಇಂತಹ ದಾಳಿ ನಡೆಸುವ ನಕ್ಸಲರು, 2024ರಲ್ಲಿ, 65ಕ್ಕೂ ಹೆಚ್ಚು ಗ್ರಾಮಸ್ಥರನ್ನು ಕೊಂದು ಹಾಕಿದ್ದರು.
ಇದನ್ನೂ ಓದಿ:ತಲೆಗೆ ಒಂದು ಕೋಟಿ ಬಹುಮಾನ ಘೋಷಿತ ನಕ್ಸಲ್ ಸೇರಿ 16 ಮಾವೋವಾದಿಗಳ ಹತ್ಯೆ: ಅಪಾರ ಪ್ರಮಾಣದ ಬಂದೂಕು, ಮದ್ದುಗುಂಡುಗಳು ವಶ - MAOISTS KILLED