ನವದೆಹಲಿ: ಇಂದು ಮಹಾನ್ ತತ್ವಜ್ಞಾನಿ ಮತ್ತು ಯುವ ಐಕಾನ್ ಸ್ವಾಮಿ ವಿವೇಕಾನಂದ ಅವರ 163ನೇ ಜನ್ಮದಿನ. ಯುವಕರು ಮಾನಸಿಕ, ಬೌದ್ಧಿಕ ಮತ್ತು ದೈಹಿಕವಾಗಿ ಸದೃಢವಾಗಿರಲು ಪ್ರೇರೇಪಿಸಿದ ಸ್ವಾಮಿ ವಿವೇಕಾನಂದ ಅವರ ಜನ್ಮದಿನವಾದ ಜನವರಿ 12 ಅನ್ನು ಪ್ರತಿ ವರ್ಷ 'ರಾಷ್ಟ್ರೀಯ ಯುವ ದಿನ'ವಾಗಿ ಸಂಭ್ರಮಿಸಲಾಗುತ್ತದೆ.
ಇಂದಿನ ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 3000 ಯುವ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ 30 ಲಕ್ಷಕ್ಕೂ ಅಧಿಕ ಯುವಕರು ಪಾಲ್ಗೊಳ್ಳಲು ಉತ್ಸುಕರಾಗಿದ್ದು, ಅರ್ಹತೆ ಆಧರಿಸಿ ಬಹುಹಂತದ ಆಯ್ಕೆ ಪ್ರಕ್ರಿಯೆಯ ಮೂಲಕ 3000 ಯುವ ನಾಯಕರನ್ನು ಆಯ್ಕೆ ಮಾಡಲಾಗಿದೆ.
ಸಾಂಪ್ರದಾಯಿಕ ರೀತಿಯಲ್ಲಿ ರಾಷ್ಟ್ರೀಯ ಯುವ ಉತ್ಸವವನ್ನು ಆಚರಿಸುವ 25 ವರ್ಷಗಳ ಹಳೆಯ ಸಂಪ್ರದಾಯವನ್ನು ಮುರಿಯುವುದು ವಿಕಸಿತ್ ಭಾರತ್ ಯುವ ನಾಯಕರ ಸಂವಾದದ ಗುರಿಯಾಗಿದೆ. ಯಾವುದೇ ರಾಜಕೀಯ ಸಂಬಂಧಗಳಿಲ್ಲದೆ ಒಂದು ಲಕ್ಷ ಯುವಕರನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಮತ್ತು ವಿಕಸಿತ್ ಭಾರತಕ್ಕಾಗಿ ಅವರ ಆಲೋಚನೆಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಯುವಕರಿಗೆ ರಾಷ್ಟ್ರೀಯ ವೇದಿಕೆಯನ್ನು ಕಲ್ಪಿಸಲು ಪ್ರಧಾನಿ ಮೋದಿ ಅವರ ಆಲೋಚನೆ ಇದಾಗಿದೆ.
ರಾಷ್ಟ್ರದ ಭವಿಷ್ಯದ ನಾಯಕರನ್ನು ಪ್ರೇರೇಪಿಸಲು, ಉತ್ತೇಜಿಸಲು ಹಾಗೂ ಸಬಲೀಕರಣಗೊಳಿಸಲು ಇಂದು ವಿನ್ಯಾಸಗೊಳಿಸಲಾದ ಹಲವು ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಭಾರತದ ಅಭಿವೃದ್ಧಿಗೆ ಪೂರಕವಾದ ಪ್ರಮುಖ ಹತ್ತು ವಿಷಯಾಧಾರಿತ ಕ್ಷೇತ್ರಗಳನ್ನು ಪ್ರತಿನಿಧಿಸುವ ಹತ್ತು ಪವರ್ ಪಾಯಿಂಟ್ ಪ್ರೆಸೆಂಟೇಷನ್ಗಳನ್ನು ಯುವಕರು ಪ್ರಸ್ತುತಪಡಿಸಲಿದ್ದಾರೆ. ಭಾರತದ ಕೆಲವು ಪ್ರಮುಖ ಸವಾಲುಗಳನ್ನು ಪರಿಹರಿಸಲು ಯುವ ನಾಯಕರು ಪ್ರಸ್ತಾಪಿಸಿದ ನವೀನ ವಿಚಾರಗಳು ಹಾಗೂ ಪರಿಹಾರಗಳನ್ನು ಈ ಪ್ರೆಸೆಂಟೇಷನ್ ಒಳಗೊಂಡಿರುತ್ತದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಪ್ರಧಾನಿ ಎಕ್ಸ್ ಪೋಸ್ಟ್:ಶನಿವಾರ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಪ್ರಧಾನಿ ಮೋದಿ, "ಭಾರತದ ಯುವ ಶಕ್ತಿಗೆ ಗೌರವ! ಜನವರಿ 12, ಸ್ವಾಮಿ ವಿವೇಕಾನಂದರ ಜಯಂತಿಯಾಗಿರುವುದರಿಂದ ಇದು ಬಹಳ ವಿಶೇಷವಾದ ದಿನವಾಗಿದೆ. ಈ ಸಂದರ್ಭದಲ್ಲಿ ನಾನು ಇಡೀ ದಿನವನ್ನು ನನ್ನ ಯುವ ಸ್ನೇಹಿತರೊಂದಿಗೆ ವಿಕಸಿತ್ ಭಾರತದ ಯುವ ನಾಯಕರ ಸಂವಾದ 2025ರಲ್ಲಿ ಕಳೆಯುತ್ತೇನೆ. ಸಂಭಾಷಣೆ ಹಾಗೂ ಊಟದ ಸಮಯದಲ್ಲಿ ನಾವು ವಿಕಸಿತ್ ಭಾರತವನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ ವಿವಿಧ ವಿಷಯಗಳನ್ನು ಚರ್ಚಿಸುತ್ತೇವೆ" ಎಂದು ತಿಳಿಸಿದ್ದಾರೆ.
"ಈ ದಿನ ಪ್ರತಿಯೊಬ್ಬ ಭಾರತೀಯ ಯುವಕರಿಗೂ ಮಹಾನ್ ಸ್ಫೂರ್ತಿಯ ದಿನವಾಗಿದೆ. ಇದು ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುವ ದಿನವಾಗಿದೆ. ಈ ದಿನ ವಿವೇಕಾನಂದ ಅವರ ರೂಪದಲ್ಲಿ ಒಂದು ಉತ್ಸಾಹಭರಿತ ಚಿಲುಮೆಯನ್ನು ಭಾರತ ಪಡೆದಿತ್ತು. ಆ ಚಿಲುಮೆಯನ್ನು ಇನ್ನೂ ನಮ್ಮ ದೇಶ ಚೈತನ್ಯಗೊಳಿಸುತ್ತಿದೆ. ಅದು ನಮಗೆ ನಿರಂತರವಾಗಿ ಸ್ಫೂರ್ತಿ ನೀಡುತ್ತಿದೆ. ಮುಂದಿನ ದಾರಿಯನ್ನು ತೋರಿಸುತ್ತಿದೆ" ಎಂದು ಈ ಹಿಂದೆ ಪ್ರಧಾನಿ ಮೋದಿ ರಾಷ್ಟ್ರೀಯ ಯುವ ದಿನದಂದು ಹೇಳಿದ್ದರು.