ಸಂವಿಧಾನ ರಚನಾ ಸಭೆಯು 1949ರ ನವೆಂಬರ್ 26ರಂದು ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ಪ್ರತೀ ವರ್ಷ ನ.26ನ್ನು 'ರಾಷ್ಟ್ರೀಯ ಸಂವಿಧಾನ ದಿನ' ಎಂದು ಆಚರಿಸಲಾಗುತ್ತದೆ. ಜನವರಿ 26, 1950ರಂದು ಜಾರಿಗೆ ಬಂದ ಸಂವಿಧಾನ, ಭಾರತದ ಪ್ರಜಾಪ್ರಭುತ್ವ, ಜಾತ್ಯತೀತ ಮತ್ತು ಸಮಾನತೆಯ ಚೌಕಟ್ಟನ್ನು ವ್ಯಾಖ್ಯಾನಿಸುವ ಮೂಲಭೂತ ದಾಖಲೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ಹೇಳಿದೆ.
ಸಂವಿಧಾನವನ್ನು ಅಂಗೀಕರಿಸಿ 75 ವರ್ಷಗಳು ಪೂರ್ಣಗೊಂಡಿದ್ದು, ಈ ವರ್ಷ ಸಂವಿಧಾನದ ಅಮೃತಮಹೋತ್ಸವವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ವರ್ಷವಿಡೀ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿವೆ.
ಇತಿಹಾಸ: ಜನರಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ 2015ರ ನವೆಂಬರ್ 19ರಂದು, ಸರ್ಕಾರ ಪ್ರತೀ ವರ್ಷ ನವೆಂಬರ್ 26 ಅನ್ನು ಸಂವಿಧಾನ ದಿನವನ್ನಾಗಿ ಆಚರಿಸುತ್ತದೆ ಎಂದು ಘೋಷಿಸಿತು. ಈ ಆಚರಣೆಯು ರಾಷ್ಟ್ರಕ್ಕೆ ಮಾರ್ಗದರ್ಶನ ನೀಡುವ ಪ್ರಜಾಸತ್ತಾತ್ಮಕ ತತ್ವಗಳ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
ನಮ್ಮ ಸಂವಿಧಾನ, ನಮ್ಮ ಹೆಮ್ಮೆ:ಭಾರತ ಸಂವಿಧಾನದ 75ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಸಾಮಾನ್ಯ ಜನರಲ್ಲೂ ಸಂವಿಧಾನದ ಬಗ್ಗೆ ತಿಳುವಳಿಕೆ ಹೆಚ್ಚಿಸುವ ಉದ್ದೇಶದಿಂದ ಈ ವರ್ಷದ ಜನವರಿ 24ರಂದು 'ನಮ್ಮ ಸಂವಿಧಾನ, ನಮ್ಮ ಹೆಮ್ಮೆ' ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ ವರ್ಷಪೂರ್ತಿ ಅಭಿಯಾನದ ಮೂಲಕ ಸಂವಿಧಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತದೆ ಎಂದು ತಿಳಿಸಿದೆ.