ನವದೆಹಲಿ: ಕೇಂದ್ರ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ದಾಖಲೆಯ ಸತತ 3ನೇ ಅವಧಿಗೆ ಅಧಿಕಾರಕ್ಕೆ ಬರಲು ಸಿದ್ಧತೆ ನಡೆಸುತ್ತಿದೆ. ದೆಹಲಿಯಲ್ಲಿ ಇಂದು ಮೈತ್ರಿಕೂಟದ ನಾಯಕರು ಹಾಗೂ ಸಂಸದರ ಮಹತ್ವದ ಸಭೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಮಿತ್ರಪಕ್ಷಗಳ ಎಲ್ಲ ಪ್ರಮುಖರು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ನಾಯಕರು ಪರಸ್ಪರ ಹೊಗಳಿದರು. ಇದೇ ವೇಳೆ, ಟಾಲಿವುಡ್ ಖ್ಯಾತ ನಟ, ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಬಗ್ಗೆ ಮೋದಿ ಶ್ಲಾಘಿಸಿದ್ದು ವಿಶೇಷ. ಇದರಿಂದ ಪವನ್ ಇಡೀ ಸಭೆಯ ಕೇಂದ್ರಬಿಂದುವಾಗಿ ಆಕರ್ಷಿತರಾದರು.
ದೇಶಾದ್ಯಂತ ಲೋಕಸಭೆಯ 543 ಕ್ಷೇತ್ರಗಳು ಹಾಗೂ ಆಂಧ್ರಪ್ರದೇಶ ಸೇರಿ ನಾಲ್ಕು ರಾಜ್ಯಗಳ ವಿಧಾನಸಭೆಗೆ ಇತ್ತೀಚೆಗೆ ಒಟ್ಟಿಗೆ ಚುನಾವಣೆ ಮುಗಿದಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಿದೆ. ಎನ್ಡಿಎ ಮೈತ್ರಿಕೂಟ ಕೇಂದ್ರ ಹಾಗೂ ಆಂಧ್ರದಲ್ಲೂ ಅಧಿಕಾರಕ್ಕೆ ಬಂದಿದೆ.
ಆಂಧ್ರದ 25 ಲೋಕಸಭೆ ಕ್ಷೇತ್ರಗಳ ಪೈಕಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ - 16, ಪವನ್ ಕಲ್ಯಾಣ್ ನೇತೃತ್ವದ ಜನಸೇನಾ - 2 ಹಾಗೂ ಬಿಜೆಪಿ - 3 ಸೇರಿ ಮೈತ್ರಿಕೂಟವು ಒಟ್ಟಾರೆ 21 ಕಡೆ ಜಯಭೇರಿ ಬಾರಿಸಿದೆ. ಜೊತೆಗೆ ರಾಜ್ಯ ವಿಧಾನಸಭೆಯ 175 ಕ್ಷೇತ್ರಗಳ ಪೈಕಿ ಟಿಡಿಪಿ - 135, ಜನಸೇನಾ - 21, ಬಿಜೆಪಿ 8 ಸ್ಥಾನಗಳೊಂದಿಗೆ ಪ್ರಚಂಡ ಗೆಲುವು ದಾಖಲಿಸಿದೆ. ವಿಶೇಷ ಎಂದರೆ, ಜನಸೇನಾ ಪಕ್ಷವು ತಾನು ಸ್ಪರ್ಧಿಸಿದ್ದ ಎಲ್ಲ ಕ್ಷೇತ್ರಗಳು ಜಯ ದಕ್ಕಿಸಿಕೊಂಡಿದೆ. ಈ ಫಲಿತಾಂಶವು ಪವನ್ ಕಲ್ಯಾಣ್ ಅವರನ್ನು ಪರಿಪೂರ್ಣ ರಾಜಕೀಯ ನಾಯಕರನ್ನಾಗಿಯೂ ರೂಪಿಸಿದೆ.