ಅಹಮದ್‌ನಗರ (ಮಹಾರಾಷ್ಟ್ರ): ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾನ್ವಿತ ಕಲಾವಿದರು ಎಲೆಮರೆಯ ಕಾಯಿಯಂತೆ ಇದ್ದಾರೆ. ಅವರು ಕಲೆಯನ್ನು ತಮ್ಮಲ್ಲೇ ಅಡಗಿಸಿಕೊಂಡು ಜೀವಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಕೊಳಲು ಕಲಾವಿದ ಹುಟ್ಟಿನಿಂದ ಅಂಧರಾದರೂ ತಮ್ಮ ಪ್ರತಿಭೆಯಿಂದ ಗುರುತಿಸಿಕೊಂಡಿದ್ದಾರೆ. ಇವರೇ ನಂದಕಿಶೋರ್ ಬಾಲಾಜಿ ಘೂಲೆ. ಇವರು ಮಹಾರಾಷ್ಟ್ರದ ಸಂಗಮ್ನೇರ್ ತಾಲೂಕಿನ ಪ್ರಸ್ಥಭೂಮಿಯಲ್ಲಿರುವ ಸಾವರಗಾಂವ್ನವರು.
ಇವರು ಬಾಲ್ಯದಿಂದಲೇ ಅಂಧರು. ಆದರೂ ಯಾರಿಗೂ ಕಮ್ಮಿ ಇಲ್ಲದಂತೆ ತಮ್ಮ ಇಳಿ ವಯಸ್ಸಿನಲ್ಲೂ ಸ್ವರದಲ್ಲೇ ತೇಲಿ ಹೋಗುವಂತೆ ಮೃದಂಗ, ತಬಲಾ, ಹಾರ್ಮೋನಿಯಂ, ಕೊಳಲನ್ನು ನುಡಿಸುತ್ತಾರೆ. ಇವರ ಕಥೆಯೆ ಸ್ಫೂರ್ತಿದಾಯಕವಾಗಿದೆ.
ಅಂಧ ಕಲಾವಿದ ನಂದಕಿಶೋರ್ 60ರ ದಶಕದಲ್ಲಿ ಅಹಮದ್‌ನಗರ ಜಿಲ್ಲೆಯ ಗುಡ್ಡಗಾಡು ಪ್ರದೇಶವಾದ ಸಾವರಗಾಂವ್ ಘುಲೆ ಎಂಬ ಸಣ್ಣ ಹಳ್ಳಿಯಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದರು. ಜನಿಸಿದಾಗ ಆರೋಗ್ಯವಾಗಿದ್ದ ಇವರು ಆರು ತಿಂಗಳ ಮಗುವಾಗಿದ್ದಾಗ ತಮ್ಮ 2 ಕಣ್ಣಿನ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಆ ಕಾಲದಲ್ಲಿ ಮನೆಯಲ್ಲಿದ್ದ ಬಡತನ, ತಮ್ಮ ಅಂಧತ್ವದಿಂದ ಸರಿಯಾಗಿ ಶಿಕ್ಷಣವನ್ನು ಸಹ ಪಡೆಯಲು ಸಾಧ್ಯವಾಗಲಿಲ್ಲ. ಈಗಲೂ ನಂದಕಿಶೋರ್ ತನ್ನ ಕುಟುಂಬದೊಂದಿಗೆ ಸಾವರ್ಗಾಂವ್ ಘೂಲೆಯಲ್ಲಿ ವಾಸಿಸುತ್ತಿದ್ದಾರೆ.
ಜೀವನಕ್ಕೆ ತಿರುವು ನೀಡಿದ ತಾಯಿಯ ಉಡುಗೊರೆ: ಅಂಧನಾಗಿದ್ದರಿಂದ ನಂದಕಿಶೋರ್ ಮನೆಯಲ್ಲೇ ಇರುತ್ತಿದ್ದರು. ಹೀಗಾಗಿ ಇವರ ತಾಯಿ ಒಂದು ರೇಡಿಯೋವನ್ನು ಮಗನಿಗೆ ನೀಡುತ್ತಾರೆ. ನಿಧಾನವಾಗಿ ರೇಡಿಯೋದಲ್ಲಿ ಹಾಡುಗಳನ್ನು ಹಾಡುತ್ತಾ ನಂದಕಿಶೋರ್ ಕೊಳಲು, ಹಾರ್ಮೋನಿಯಂ, ಮೃದಂಗ ಬಾರಿಸತೊಡಗಿದರು. ಪರಿಣಾಮ ಇಂದು ಅವರು ಅತ್ಯುತ್ತಮ ಸಂಗೀತ ಕಲಾವಿದ ಎಂದೆನಿಸಿಕೊಂಡಿದ್ದಾರೆ. ಇದರೊಂದಿಗೆ ವಿವಿಧ ಗೌಲಾನಿ, ಅಭಂಗ್‌ಗಳನ್ನು ಸಹ ಉತ್ತಮ ರೀತಿಯಲ್ಲಿ ಹಾಡುತ್ತಾರೆ.