ನವದೆಹಲಿ:ಭ್ರಷ್ಟಾಚಾರ ಪ್ರಕರಣದಲ್ಲಿ ರಾಷ್ಟ್ರೀಯ ಮೌಲ್ಯಮಾಪನಾ ಮತ್ತು ಮಾನ್ಯತೆ ಮಂಡಳಿ (NAAC)ಯ ತಪಾಸಣಾ ಸಮಿತಿಯ ಅಧ್ಯಕ್ಷ ಮತ್ತು 6 ಮಂದಿ ಸದಸ್ಯರನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಶನಿವಾರ ಬಂಧಿಸಿದೆ. ಪ್ರತಿಷ್ಟಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್‌ಯು)ದ ಪ್ರೊಫೆಸರ್ ಕೂಡಾ ಬಂಧಿತರಲ್ಲಿ ಒಬ್ಬರು ಎಂಬುದು ಗಮನಾರ್ಹ.
ಆಂಧ್ರ ಪ್ರದೇಶದಲ್ಲಿರುವ ಕೊನೇರು ಲಕ್ಷ್ಮಣಯ್ಯ ಎಜುಕೇಶನ್ ಫೌಂಡೇಶನ್ (KLEF)ನ ಉಪ ಕುಲಪತಿ ಮತ್ತು ಸಂಸ್ಥೆಯ ಇಬ್ಬರು ಅಧಿಕಾರಿಗಳು ಬಂಧಿತರಲ್ಲಿ ಸೇರಿದ್ದಾರೆ. ಕೊನೇರು ಲಕ್ಷ್ಮಣಯ್ಯ ಎಜುಕೇಶನ್ ಫೌಂಡೇಶನ್‌ನ ಅಧ್ಯಕ್ಷ ಕೊನೇರು ಸತ್ಯನಾರಾಯಣ, NAAC ಮಾಜಿ ಉಪ ಸಲಹೆಗಾರ ಎಲ್.ಮಂಜುನಾಥ ರಾವ್, ಬೆಂಗಳೂರಿನ IQAC-NAAC ಪ್ರೊಫೆಸರ್ ಮತ್ತು ನಿರ್ದೇಶಕ ಎಂ.ಹನುಮಂತಯ್ಯ, NAAC ಸಲಹೆಗಾರ ಎಂ.ಎಸ್.ಶ್ಯಾಮ್‌ಸುಂದರ್ ಅವರ ಹೆಸರುಗಳನ್ನೂ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ. ಆದರೆ ಸದ್ಯಕ್ಕೆ ಇವರನ್ನು ತನಿಖಾ ಸಂಸ್ಥೆ ಬಂಧಿಸಿಲ್ಲ.
A++ ಮಾನ್ಯತೆ ಪಡೆಯಲು NAAC ತಪಾಸಣಾ ಸಮಿತಿಗೆ ಲಂಚ ನೀಡಿದ ಗಂಭೀರ ಆರೋಪದ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಬಿಐ, KLEF ಉಪ ಕುಲಪತಿ ಜಿ.ಪಿ.ಸರಧಿ ವರ್ಮಾ, ಇದೇ ಸಂಸ್ಥೆಯ ಉಪಾಧ್ಯಕ್ಷ ಕೊನೇರು ರಾಜಾ ಹರೀನ್, ಕೆ.ಎಲ್. ವಿವಿ ಹೈದರಾಬಾದ್ ಕ್ಯಾಂಪಸ್‌ನ ನಿರ್ದೇಶಕ ಎ.ರಾಮಕೃಷ್ಣ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಮಾಹಿತಿ ನೀಡಿದೆ.
ರಾಮಚಂದ್ರ ಚಂದ್ರವಂಶಿ ವಿ.ವಿಯ ಉಪ ಕುಲಪತಿಯೂ ಆಗಿರುವ NAAC ತಪಾಸಣಾ ಸಮಿತಿಯ ಅಧ್ಯಕ್ಷರಾದ ಸಮರೇಂದ್ರ ನಾಥ್ ಸಾಹಾ ಅವರನ್ನೂ ಸಿಬಿಐ ಬಂಧಿಸಿದೆ.