ಚೆನ್ನೈ(ತಮಿಳುನಾಡು):ಉದ್ಯೋಗ ಕೊಡಿಸುವುದಾಗಿ ಹೇಳಿ ಮೈಸೂರು ಮೂಲದ 19 ವರ್ಷದ ಯುವತಿಯೊಬ್ಬಳ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಆರೋಪಿ ಹಾಗೂ ಆತನ ಸಹಚರಳನ್ನು ಪೊಲೀಸರು ಬಂಧಿಸಿದ್ದಾರೆ.
ವೆಲ್ಲೂರು ಮೂಲದ ಸತೀಶ್ ಕುಮಾರ್ (32) ಬಂಧಿತ ಆರೋಪಿ. ಈತನ ಸಹಚರೆ ಎನ್ನಲಾದ ಮಡಿಪಾಕ್ಕಂ ಮೂಲದ ಶಕೀಲಾ (33) ಎಂಬಾಕೆಯನ್ನೂ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜೈಲಿಗೆ ಸ್ಥಳಾಂತರಿಸಿದ್ದಾರೆ. ಪ್ರಮುಖ ಆರೋಪಿ ಚೆನ್ನೈನಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ವಿವರ: ಯುವತಿ ಇತ್ತೀಚೆಗೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಳು. ತನ್ನ ತಂದೆ-ತಾಯಿಯನ್ನು ಕೊಯಮತ್ತೂರಿನಲ್ಲಿ ಬಿಟ್ಟು, ಕೆಲಸ ಹುಡುಕಿಕೊಂಡು ಚೆನ್ನೈಗೆ ಬಂದಿದ್ದಳು. ಕೋವಿಲಂಬಾಕ್ಕಂನಲ್ಲಿರುವ ಸ್ನೇಹಿತರ ಮನೆಗೆ ತಂಗಲು ತೆರಳಿದ್ದಳು. ಬಳಿಕ ತಾನು ಮೈಸೂರಿಗೆ ಮರಳಿ ಹೋಗಬೇಕೆಂದು ನಿರ್ಧರಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಳು.