ಬರೇಲಿ (ಉತ್ತರ ಪ್ರದೇಶ): ಯೋಧನೊಬ್ಬ ಸಹ ಕಾನ್ಸ್ಟೇಬಲ್ಗೆ ರೈಫಲ್ನಿಂದ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಬರೇಲಿಯ ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸೇನಾ ಶಿಬಿರದಲ್ಲಿ ಶುಕ್ರವಾರ ನಡೆದಿದೆ. ಯೋಧ ಹಾಗೂ ಕಾನ್ಸ್ಟೇಬಲ್ ನಡುವೆ ಕೆಲವು ವಿಚಾರಕ್ಕೆ ವಾಗ್ವಾದ ನಡೆದಿದ್ದು, ಗಲಾಟೆ ತಾರಕಕ್ಕೇರಿ ಯೋಧ ಗೇಟ್ ಬಳಿ ನಿಂತಿದ್ದ ಕಾವಲುಗಾರನ ಸರ್ವಿಸ್ ರೈಫಲ್ ಕಿತ್ತುಕೊಂಡು ಗುಂಡು ಹಾರಿಸಿದ್ದಾನೆ. 40 ವರ್ಷದ ಕಮಲ್ ಜೋಶಿ ಕೊಲೆಯಾದ ಕಾನ್ಸ್ಟೇಬಲ್ ಎಂದು ತಿಳಿದು ಬಂದಿದೆ.
ಬರೇಲಿಯ ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸೇನೆಯ 606 ಇಎಂಇ ಬೆಟಾಲಿಯನ್ನಲ್ಲಿ ಕಾನ್ಸ್ಟೇಬಲ್ ಆಗಿ ಅಸ್ಸಾಂನ ನಿವಾಸಿಯಾಗಿದ್ದ ಕಮಲ್ ಜೋಶಿ ನೇಮಕಗೊಂಡಿದ್ದರು. ರಜೆಯಲ್ಲಿ ಮನೆಗೆ ತೆರಳಿದ್ದ ಅವರು ಶುಕ್ರವಾರ ಬೆಟಾಲಿಯನ್ಗೆ ವಾಪಸ್ ಆಗಿದ್ದರು. ಈ ಸಂದರ್ಭದಲ್ಲಿ ಬೆಟಾಲಿಯನ್ನಲ್ಲಿದ್ದ ಯೋಧ ರಾಜೇಶ್ ರತ್ನ ಹಾಗೂ ಇವರ ಮಧ್ಯೆ ಯಾವುದೋ ವಿಷಯಕ್ಕೆ ಸಣ್ಣದಾಗಿ ಜಗಳ ಪ್ರಾರಂಭವಾಗಿದೆ. ಮಾತಿಗೆ ಮಾತು ಬೆಳೆದು, ಜಗಳ ತಾರಕಕ್ಕೇರಿದೆ. ಈ ವೇಳೆ ಯೋಧ ರಾಜೇಶ್ ಅಲ್ಲೇ ಗೇಟ್ ಬಳಿ ನಿಂತಿದ್ದ ಕಾವಲುಗಾರನ ರೈಪಲ್ ತೆಗೆದುಕೊಂಡು ಕಮಲ್ ಜೋಶಿಗೆ ಗುಂಡು ಹಾರಿಸಿದ್ದಾನೆ. ಇದರಿಂದಾಗಿ ಕಮಲ್ ಜೋಶಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.