ಹೈದರಾಬಾದ್:ದೇಶದ ಸಿರಿವಂತ ಉದ್ಯಮಿ ಮುಖೇಶ್ ಅಂಬಾನಿ ತಮ್ಮ ಪುತ್ರ ಅನಂತ್ ಅಂಬಾನಿ ಅವರ ಅದ್ಧೂರಿ ಮದುವೆಗೆ ಹೈ ಪ್ರೊಫೈಲ್ ಅತಿಥಿಗಳನ್ನು ಆಹ್ವಾನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗುರುವಾರ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಅವರನ್ನು ಆಮಂತ್ರಿಸಿದರು.
ಜುಲೈ 12ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ನಿಗದಿಯಾಗಿದೆ. ಮುಂಬೈನ ಆಂಟಿಲಿಯಾದ ಅಂಬಾನಿ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಅದ್ದೂರಿ ಮದುವೆಗೆ ಅನೇಕ ಕ್ಷೇತ್ರದ ದಿಗ್ಗಜರನ್ನು ಆಹ್ವಾನಿಸಲಾಗುತ್ತಿದೆ. ಉದ್ಯಮಿಗಳು, ಬಾಲಿವುಡ್ ಮತ್ತು ಕ್ರೀಡಾ ಜಗತ್ತಿನ ಖ್ಯಾತನಾಮರು, ರಾಜಕೀಯ ನಾಯಕರು ಸೇರಿದ್ದಾರೆ. ಖ್ಯಾತ ಗಾಯಕ ಜಸ್ಟೀನ್ ಬೀಬರ್ ಈಗಾಗಲೇ ಮುಂಬೈಗೆ ಆಗಮಿಸಿದ್ದು, ಕಾರ್ಯಕ್ರಮದಲ್ಲಿ ವಿಶೇಷ ಪ್ರದರ್ಶನ ನೀಡಲಿದ್ದಾರೆ.
ಜುಲೈ 12ರಂದು ಶುಭ ವಿವಾಹ್ ನಡೆಯಲಿದೆ. ಅತಿಥಿಗಳು ಸಾಂಪ್ರದಾಯಿಕ ಭಾರತೀಯ ಉಡುಪು ಧರಿಸಲು ವಿನಂತಿಸಲಾಗಿದೆ. ಜುಲೈ 13ರಂದು ಶುಭ ಆಶೀರ್ವಾದ್ ಸಮಾರಂಭವಿದ್ದು, ಭಾರತೀಯ ಔಪಚಾರಿಕ ಉಡುಪು ಧರಿಸಲು ಕೋರಲಾಗಿದೆ. ಜುಲೈ 14ರಂದು, ಭಾರತೀಯ ಚಿಕ್ ಥೀಮ್ ಡ್ರೆಸ್ ಕೋಡ್‌ನೊಂದಿಗೆ ಮಂಗಲ್ ಉತ್ಸವ ಅಥವಾ ವಿವಾಹದ ಆರತಕ್ಷತೆ ನಡೆಯಲಿದೆ.