ರಾಂಚಿ, ಜಾರ್ಖಂಡ್: ತಾಯಿಯೊಬ್ಬಳು ಮೂಢನಂಬಿಕೆಗೆ ಒಳಗಾಗಿ ತನ್ನ ಒಂದೂವರೆ ವರ್ಷದ ಮಗಳನ್ನೇ ಕೊಲೆ ಮಾಡಿರುವ ಘಟನೆ ಜಾರ್ಖಂಡ್‌ನ ಪಲಮುದಲ್ಲಿ ನಡೆದಿದೆ. ಜಿಲ್ಲೆಯ ಹುಸೇನಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಖಾರದ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ತಾಯಿಯನ್ನು ಬಂಧಿಸಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಘಟನೆಯ ಕುರಿತು ಮಾಹಿತಿ ನೀಡಿರುವ ಪೊಲೀಸ್ ಠಾಣೆಯ ಪ್ರಭಾರಿ ಸಂಜಯ್ ಕುಮಾರ್ ಯಾದವ್, ಆರೋಪಿ ಮಹಿಳೆಯನ್ನು ಖರಾದ್ ಗ್ರಾಮದ ನಿವಾಸಿ ಅರುಣ್ ರಾಮ್ ಪತ್ನಿ ಗೀತಾದೇವಿ (25) ಎಂದು ಗುರುತಿಸಲಾಗಿದೆ. ಮೂಢನಂಬಿಕೆಯಿಂದ ಮಗಳನ್ನು ಕೊಂದ ಗೀತಾದೇವಿ, ಆ ಬಳಿಕ ಮನೆಯಿಂದ ಒಂದೂವರೆ ಎರಡು ಕಿಲೋಮೀಟರ್ ದೂರದಲ್ಲಿರುವ ಸಿಕ್ನಿ ಬರ್ವಧೋರಾ ಅರಣ್ಯದ ಬಳಿ ಆ ಮಗುವನ್ನು ಮಣ್ಣಿನಲ್ಲಿ ಹೂತು ಹಾಕಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದು ಪರಿಶೀಲಿಸಲಾಗಿದ್ದು, ಆರೋಪಿ ಮಹಿಳೆಯನ್ನು ಇದೀಗ ಬಂಧಿಸಲಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ.
ಮಣ್ಣಲ್ಲಿ ಹುಗಿದು ಹಾಕಿ ಮನೆಗೆ ತೆರಳಿದ್ದ ಮಹಾತಾಯಿ:ಮಗುವನ್ನು ಮಣ್ಣಿನಲ್ಲಿ ಹೂತು ಹಾಕಿದ ಬಳಿಕ ಮನೆಗೆ ತೆರಳಿದ ಮಹಿಳೆಯನ್ನು ಅಕೆಯ ಅತ್ತೆ ಗಮನಿಸಿದ್ದು, ಮಗುವಿನ ಬಗ್ಗೆ ವಿಚಾರಿಸಿದ್ದಾರೆ. ಮಹಿಳೆಯು ಮಗುವನ್ನು ಕೊಂದಿರುವುದಾಗಿ ಕೇಳಿದ್ದಾಳೆ. ಆತಂಕಗೊಂಡ ಮಹಿಳೆಯ ಅತ್ತೆಯ ಗೋಳಾಟ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.