ನವದೆಹಲಿ:ವಿವಾಹಿತ ಮಹಿಳೆಯರು ತಮ್ಮ ಸ್ವಾರ್ಥ ಸಾಧನೆಗಾಗಿ ತಮ್ಮ ಗಂಡಂದಿರು ಮತ್ತು ಅತ್ತೆ ಮಾವಂದಿರಿಗೆ ಕಿರುಕುಳ ನೀಡಲು ಕ್ರೌರ್ಯ ತಡೆಗಟ್ಟುವ ಕಾನೂನನ್ನು ವ್ಯಾಪಕವಾಗಿ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಕಳವಳ ವ್ಯಕ್ತಪಡಿಸಿದೆ.
ತನ್ನ ಮಾಜಿ ಪತ್ನಿ ತನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಹಣ ಸುಲಿಗೆ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ (34) ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಮಧ್ಯೆ ಸುಪ್ರೀಂ ಕೋರ್ಟ್ನ ಈ ಉಲ್ಲೇಖ ಮಹತ್ವ ಪಡೆದುಕೊಂಡಿದೆ.
ಸೆಕ್ಷನ್ 498-ಎ: ಪತಿ ಮತ್ತು ಪತ್ನಿಯ ಅತ್ತೆ ಮಾವಂದಿರ ವಿರುದ್ಧ ಸೆಕ್ಷನ್ 498-ಎ (ಕ್ರೌರ್ಯ) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವೊಂದನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಇಂದು (ಡಿಸೆಂಬರ್ 10), ವೈವಾಹಿಕ ಭಿನ್ನಾಭಿಪ್ರಾಯದಿಂದ ಕೌಟುಂಬಿಕ ವಿವಾದಗಳು ಉದ್ಭವಿಸಿದಾಗ ಗಂಡನ ಕುಟುಂಬದ ಎಲ್ಲಾ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸುವ ಪ್ರವೃತ್ತಿಯ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
ಅತ್ತೆ-ಮಾವಂದಿರ ಕ್ರೌರ್ಯದಿಂದ ಮಹಿಳೆಯರನ್ನು ರಕ್ಷಿಸುವ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಮುಗ್ಧ ಜನರಿಗೆ ಅನಗತ್ಯ ಕಿರುಕುಳವನ್ನು ತಡೆಗಟ್ಟಲು ವರದಕ್ಷಿಣೆ ಕಿರುಕುಳ ಪ್ರಕರಣಗಳನ್ನು ನಿರ್ಧರಿಸುವಾಗ ನ್ಯಾಯಾಲಯಗಳು ಎಚ್ಚರಿಕೆಯಿಂದ ತೀರ್ಮಾನಿಸಬೇಕು ಎಂದು ಸೂಚಿಸಿದೆ.