ಬಿಜಾಪುರ (ಛತ್ತೀಸ್‌ಗಢ) :ಹೊಸ ವರ್ಷದ ಮೊದಲ ದಿನದಂದು ನಾಪತ್ತೆಯಾಗಿದ್ದ ಪತ್ರಕರ್ತ ಸೆಪ್ಟಿಕ್ ಟ್ಯಾಂಕ್ನಲ್ಲಿ ಶವವಾಗಿ ಶುಕ್ರವಾರ ಪತ್ತೆಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಖೇಶ್ ಚಂದ್ರಾಕರ್ (32) ಮೃತ ಪತ್ರಕರ್ತ. ಈತ ಹಲವು ಮಾಧ್ಯಮಗಳಿಗೆ ವರದಿಗಾರಿಕೆ ಮಾಡಿದ್ದಾರೆ. ನಕ್ಸಲ್ವಾದದ ಬಗ್ಗೆ ವರದಿ ಮಾಡುತ್ತಿದ್ದ ಈತನಿಗೆ ಜೀವ ಬೆದರಿಕೆಗಳು ಬರುತ್ತಿದ್ದವು. ಜನವರಿ 1ನೇ ತಾರೀಖಿನಿಂದ ಅವರು ನಾಪತ್ತೆಯಾಗಿದ್ದರು. ಈ ಬಗ್ಗೆ ದೂರು ದಾಖಲಾಗಿ, ಪೊಲೀಸರು ಹುಡುಕಾಟ ನಡೆಸಿದಾಗ ಬಿಜಾಪುರ ರಸ್ತೆಯ ಗುತ್ತಿಗೆದಾರರೊಬ್ಬರ ಮನೆಯ ಆವರಣದಲ್ಲಿನ ಸೆಪ್ಟಿಕ್ ಟ್ಯಾಂಕ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಜನವರಿ 1 ರಂದು ಸ್ಥಳೀಯ ಗುತ್ತಿಗೆದಾರನ ಸೋದರ ಸಂಬಂಧಿಯಿಂದ ಕರೆ ಬಂದ ನಂತರ ಅವರು ನಾಪತ್ತೆಯಾಗಿದ್ದರು. ತಮ್ಮನ್ನು ಗುತ್ತಿಗೆದಾರನ ಸಹೋದರ ಭೇಟಿ ಮಾಡುವ ಬಗ್ಗೆ ಮುಕೇಶ್ ಇನ್ನೊಬ್ಬ ಪತ್ರಕರ್ತನಿಗೆ ಮಾಹಿತಿ ನೀಡಿದ್ದ. ಹೊಸ ವರ್ಷದ ದಿನದಂದು ಮಧ್ಯರಾತ್ರಿ 12.30 ಕ್ಕೆ ಆತನ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.