ನಾಗ್ಪುರ್: ಸುಮಾರು ನಾಲ್ಕು ತಿಂಗಳ ಹಿಂದೆ ಮದ್ಯದ ನಶೆಯಲ್ಲಿ ಮರ್ಸಿಡಿಸ್ ಕಾರು ಚಲಾಯಿಸಿ ಇಬ್ಬರಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಳಿಸಿದ ಆರೋಪಿ ಮಹಿಳೆ ಶರಣಾಗಿದ್ದು, ಬಂಧಿಸಲಾಗಿದೆ ಎಂದು ನಾಗ್ಪುರ ಪೊಲೀಸರು ತಿಳಿಸಿದ್ದಾರೆ.
ರಿತಿಕಾ ಅಲಿಯಾಸ್ ರಿತು ಮಲೂ ಸೋಮವಾರ ಸಂಜೆ ಪೊಲೀಸ್ ಠಾಣೆಗೆ ವಿಚಾರಣೆಗೆ ಆಗಮಿಸಿದ್ದರು. ಇದಾದ ಬಳಿಕ ಆಕೆಯನ್ನು ಬಂಧಿಸಲಾಗಿದೆ. ಕಳೆದ ತಿಂಗಳು ಈಕೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಗಂಭೀರ ದುರ್ನಡತೆ ಎಂದು ಕೋರ್ಟ್ ಎಚ್ಚರಿಸಿತ್ತು.
ಘಟನೆಯ ವಿವರ: ಫೆಬ್ರವರಿ 25ರಂದು ರಿತಿಕಾ, ಮದ್ಯ ಸೇವಿಸಿ ತನ್ನ ಐಷಾರಾಮಿ ಮರ್ಸಿಡಿಸ್ ಕಾರು ಚಲಾಯಿಸುತ್ತಿದ್ದರು. ನಾಗ್ಪುರದ ರಾಮ್ ಜುಲಾ ಸೇತುವೆ ಬಳಿ ಜೋರಾಗಿ ಸಾಗಿ ಇಬ್ಬರು ಸ್ಕೂಟರ್ ಪ್ರಯಾಣಿಕರಿಗೆ ಡಿಕ್ಕಿ ಹೊಡೆದಿದ್ದರು. ಪರಿಣಾಮ, ಸ್ಕೂಟರ್ನಲ್ಲಿದ್ದ ಮೊಹಮ್ಮದ್ ಹುಸೇನ್ ಗುಲಾಮ್ ಮುಸ್ತಫಾ ಮತ್ತು ಮೊಹಮ್ಮದ್ ಅತೀಫ್ ಮೊಹಮ್ಮದ್ ಜಿಯಾ ಎಂಬಿಬ್ಬರು ಮಾರಣಾಂತಿಕವಾಗಿ ಗಾಯಗೊಂಡಿದ್ದರು.