ಅಜ್ಮೇರ್ (ರಾಜಸ್ಥಾನ):ಇಲ್ಲಿನ ಪುಷ್ಕರ್ ಅಂತಾರಾಷ್ಟ್ರೀಯ ಜಾನುವಾರು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಎಂಟು ವರ್ಷದ ಕೋಣ ಎಲ್ಲರ ಹುಬ್ಬೇರಿಸಿದೆ. ಈ ಕೊಬ್ಬಿದ ಕೋಣದ ಹೆಸರು ಅನ್ಮೋಲ್. ಇದು ಬರೋಬ್ಬರಿ 1500 ಕೆಜಿ ತೂಕವಿದೆ. ಮಾಂಸಖಂಡಗಳಿಂದ ತುಂಬಿಕೊಂಡಿರುವ ಇದನ್ನು ಖರೀದಿಸಲು ಜನರು ಮುಗಿಬಿದ್ದಿದ್ದಾರೆ.
ಹರಿಯಾಣದ ಸಿರ್ಸಾ ಜಿಲ್ಲೆಯ ಹಿಸ್ಸು ಗ್ರಾಮದ ನಿವಾಸಿ ಪಾಲ್ಮಿಂದ್ರ ಗಿಲ್ ಅವರು ಸಾಕಿರುವ ಈ ಕೋಣವು, ತನ್ನ ದೈತ್ಯಾಕಾರದಿಂದಲೇ ಸುತ್ತಲಿನ ಹಳ್ಳಿಗಳಲ್ಲಿ ಹೆಸರುವಾಸಿಯಾಗಿದೆ. ಒಂದೂವರೆ ಟನ್ಗಿಂತಲೂ ಹೆಚ್ಚು ತೂಗುವ ಈ ಕೋಣ, ಪುಷ್ಕರ ಮೇಳದಲ್ಲಿ ಗಮನ ಸೆಳೆದಿದೆ.
23 ಕೋಟಿ ರೂಪಾಯಿ ಬೆಲೆ:ಮೇಳದಲ್ಲಿ ಇದನ್ನು ಖರೀದಿಸಲು ಜನರು ನಾ ಮುಂದು ತಾ ಮುಂದು ಎಂದು ಪೈಪೋಟಿಗೆ ಇಳಿದಿದ್ದಾರೆ. 23 ಕೋಟಿ ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಆದರೆ, ಇದರ ಮಾಲೀಕರು ಮಾತ್ರ ಮಾರಾಟಕ್ಕೆ ಒಪ್ಪುತ್ತಿಲ್ಲ.
ದಿನಕ್ಕೆ ₹1,500 ಖರ್ಚು:ಈ ದೈತ್ಯ ಕೋಣವನ್ನು ಸಾಕುವುದು ಅಷ್ಟೇ ದುಬಾರಿಯಂತೆ. ಇದಕ್ಕೆ ಹಣ್ಣು, ಮೊಟ್ಟೆ, ಜೋಳ, ಸೋಯಾಬೀನ್, ದೇಸಿ ತುಪ್ಪ, ಹಾಲು, ಎಣ್ಣೆ ಕೇಕ್ ಮತ್ತು ಹಸಿರು ಮೇವನ್ನು ತಿನ್ನಿಸುತ್ತೇವೆ. ಇದರ ಆಹಾರಕ್ಕಾಗಿ ದಿನಕ್ಕೆ 1 ಸಾವಿರದಿಂದ 1,500 ರೂಪಾಯಿ ಖರ್ಚಾಗುತ್ತದೆ ಎನ್ನುತ್ತಾರೆ ಮಾಲೀಕರು.