ನವದೆಹಲಿ:ಕೋಲ್ಕತ್ತಾದಲ್ಲಿನ ಕಿರಿಯ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಜ್ಜುಗೊಂಡಿದೆ. ಕೋಲ್ಕತ್ತಾದ ಆರ್‌ಜಿ ಕಾರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಡೆದ ಅಮಾನುಷ ಕೃತ್ಯದ ವಿರುದ್ಧ ಶನಿವಾರ (ಆಗಸ್ಟ್ 17) ಬೆಳಗ್ಗೆ 6 ಗಂಟೆಯಿಂದ ದೇಶಾದ್ಯಂತ ಹೊರರೋಗಿ(OP) ಸೇವೆಗಳನ್ನು ಬಂದ್ ಮಾಡಲಾಗುತ್ತಿದೆ. ತುರ್ತು ಹಾಗೂ ಅಪಘಾತ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುವ ಬಗ್ಗೆ ರಾಜ್ಯ ಇಲಾಖೆಗಳ ಜೊತೆಗಿನ ಸಭೆ ಬಳಿಕ ಐಎಂಎ ಈ ನಿರ್ಧಾರ ಕೈಗೊಂಡಿದೆ.
ಮಹಿಳಾ ವೈದ್ಯೆಯ ಮೇಲಿನ ಅಮಾನುಷ ಘಟನೆಯನ್ನು ವಿರೋಧಿಸಿ ಕೋಲ್ಕತ್ತಾದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆಯಂದು (ಬುಧವಾರ ರಾತ್ರಿ) ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಯುತ್ತಿರುವಾಗಲೇ ಆವರಣದ ಮೇಲೆ ಗುಂಪೊಂದು ದಾಳಿ ನಡೆಸಿತು. ಈ ಹ್ಯೇಯ ಕೃತ್ಯದ ವಿರುದ್ಧ ಶನಿವಾರ (ಆಗಸ್ಟ್ 17) ಬೆಳಗ್ಗೆ 6 ಗಂಟೆಯಿಂದ ಭಾನುವಾರ (ಆಗಸ್ಟ್ 18) ಬೆಳಗ್ಗೆ 6 ಗಂಟೆಯವರೆಗೆ ಮಾಡರ್ನ್ ಮೆಡಿಸಿನ್ ವೈದ್ಯರ ಸೇವೆಯನ್ನು ಬಂದ್ ಮಾಡಲಾಗುತ್ತಿದೆ.
ವೈದ್ಯಕೀಯ ವೃತ್ತಿಯ ಸ್ವರೂಪದಿಂದಾಗಿ ವಿಶೇಷವಾಗಿ ವೈದ್ಯೆಯರು ಹಿಂಸೆಗೆ ಬಲಿಯಾಗುತ್ತಾರೆ. ಅಂತಹ ವೈದ್ಯರಿಗೆ ಆಸ್ಪತ್ರೆ ಮತ್ತು ಕ್ಯಾಂಪಸ್‌ಗಳಲ್ಲಿ ಭದ್ರತೆ ಒದಗಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ವೈದ್ಯರು, ಶುಶ್ರೂಷಕರು ಹಾಗೂ ಇತರ ಆರೋಗ್ಯ ಕಾರ್ಯಕರ್ತರ ಬೇಡಿಕೆಗಳನ್ನು ನೋಡಿಕೊಳ್ಳುವ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ದೈಹಿಕ ಹಲ್ಲೆ, ಅಪರಾಧಗಳು ನಡೆಯುತ್ತಿವೆ ಎಂದು ಐಎಂಎ ಪ್ರಕಟಣೆಯಲ್ಲಿ ವಿವರಿಸಿದೆ.