ನವದೆಹಲಿ:ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊತ್ತು ದೇಶದಿಂದ ಪರಾರಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್ಪೋರ್ಟ್ ರದ್ದು ಮಾಡಲು ಕರ್ನಾಟಕ ಸರ್ಕಾರ ಮಾಡಿರುವ ಮನವಿಯನ್ನು ವಿದೇಶಾಂಗ ಇಲಾಖೆ (ಎಂಇಎ) ಪರಿಗಣಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಗುರುವಾರ ತಿಳಿಸಿದೆ.
ಸಂಸದರ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರದಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬಂದಿದೆ. ಇದನ್ನು ಶೀಘ್ರವೇ ಪರಿಗಣನೆಗೆ ತೆಗೆದುಕೊಂಡು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ವಿದೇಶಾಂಗ ಇಲಾಖೆ ಅಧಿಕಾರಿಗಳು ತಿಳಿಸಿದ್ದಾಗಿ ಅಧಿಕೃತ ಮೂಲಗಳು ಮಾಹಿತಿ ನೀಡಿವೆ.
ಜೆಡಿಎಸ್ನಿಂದ ಅಮಾನತಾದ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದ್ದರೂ, ಅವರ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡುವ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯದ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ ಬೆನ್ನಲ್ಲೇ ವಿದೇಶಾಂಗ ಇಲಾಖೆಯಿಂದ ಈ ಮಾಹಿತಿ ಹೊರಬಿದ್ದಿದೆ.
ಕೋರ್ಟ್ನಿಂದ ಬಂಧನ ವಾರಂಟ್:ಲೈಂಗಿಕ ಕಿರುಕುಳ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ)ಯು ಸಲ್ಲಿಸಿದ ಅರ್ಜಿಯ ಮೇರೆಗೆ ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಜ್ವಲ್ ರೇವಣ್ಣ ವಿರುದ್ಧ ಶನಿವಾರ ಬಂಧನ ವಾರಂಟ್ ಹೊರಡಿಸಿದೆ. ಬಳಿಕ ರಾಜ್ಯ ಸರ್ಕಾರ ಪಾಸ್ಪೋರ್ಟ್ ರದ್ದು ಮಾಡಲು ಕೋರಿ ವಿದೇಶಾಂಗ ಇಲಾಖೆ ಪತ್ರ ಬರೆದಿತ್ತು.