ಮಲಪ್ಪುರಂ (ಕೇರಳ): ವಲಂಚೇರಿಯಲ್ಲಿ ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬನನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೊದಲು ಇಬ್ಬರನ್ನು ಬಂಧಿಸಲಾಗಿತ್ತು. ವಲಂಚೇರಿ ಮೂಲದ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೂರು ದಿನಗಳ ಹಿಂದೆ ಮೂವರ ತಂಡ ತನ್ನ ಮನೆಗೆ ನುಗ್ಗಿ ಅತ್ಯಾಚಾರ ಎಸಗಿತ್ತು ಎಂದು ಮಹಿಳೆ ದೂರಿದ್ದಾರೆ. ನಿನ್ನೆ ಮಧ್ಯಾಹ್ನ ಮಹಿಳೆ ದೂರು ದಾಖಲಿಸಿದ್ದರು. ಘಟನೆ ಹಿಂದೆ ಗೊತ್ತಿರುವವರ ಕೈವಾಡವಿದೆ ಎಂದು ಮಹಿಳೆ ಹೇಳಿದ್ದಾರೆ. ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಮಂಚೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪೊಲೀಸರ ಪ್ರಕಾರ, ಬಂಧಿತ ವ್ಯಕ್ತಿ ಮಲಪ್ಪುರಂನಿಂದ ಪರಾರಿಯಾಗಿದ್ದನು. ಇಂದು (ಶನಿವಾರ) ಬೆಳಗ್ಗೆ ಪಾಲಕ್ಕಾಡ್‌ನಿಂದ ಆರೋಪಿಯನ್ನು ಬಂಧಿಸಲಾಗಿದೆ. ಜೂನ್ 16 ರಂದು ಮೂವರು ವ್ಯಕ್ತಿಗಳು ಮನೆಗೆ ನುಗ್ಗಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ವಿವಾಹಿತ ಮಹಿಳೆ ದೂರು ನೀಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.