ನವದೆಹಲಿ:ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ ದೇವರ ಮೂರ್ತಿ ಪ್ರಾಣ ಪ್ರತಿಪ್ಠಾಪನೆ ಕಾರ್ಯಕ್ಕೆ ಒಂದೇ ದಿನ ಬಾಕಿ ಇದೆ. ನಾಳೆ ನಡೆಯಲಿರುವ ಭವ್ಯ ಸಮಾರಂಭಕ್ಕೆ ಭರದ ಸಿದ್ಧತೆಗಳು ಅಂತಿಮ ಘಟ್ಟಕ್ಕೆ ತಲುಪಿವೆ. ಈಗಾಗಲೇ ದೇಶದ ಸಾಧು-ಸಂತರು, ಹಲವು ಗಣ್ಯರ ದಂಡೇ ರಾಮನೂರಿಗೆ ಹರಿದು ಬರುತ್ತಿದೆ. ಕರ್ನಾಟಕದಿಂದಲೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕುಟುಂಬ ಹಾಗೂ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಸೇರಿ ಅನೇಕರು ಅಯೋಧ್ಯೆಗೆ ತೆರಳಿದ್ದಾರೆ.
ಅಯೋಧ್ಯೆಯ ಭವ್ಯವಾದ ರಾಮ ಮಂದಿರವನ್ನು ಪುಷ್ಪಗಳು ಮತ್ತು ವಿಶೇಷ ದೀಪಗಳಿಂದ ಅಲಂಕರಿಸಲಾಗಿದೆ. ಇಡೀ ಪಟ್ಟಣವು ಧಾರ್ಮಿಕ ಉತ್ಸಾಹದಲ್ಲಿ ಮುಳುಗಿದೆ. ಹೊಸದಾಗಿ ತಲೆಎತ್ತಿರುವ ರಾಮ ಮಂದಿರದಲ್ಲಿ ಜನವರಿ 16ರಿಂದಲೇ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭವಾಗಿವೆ. ಭಾನುವಾರ, ಆರನೇ ದಿನವಾಗಿದೆ. ಜನವರಿ 22ರಂದು ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮುಖ್ಯ ಕಾರ್ಯಕ್ರಮ ನಡೆಯಲಿದೆ.
ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ದೇಶ-ವಿದೇಶಗಳ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಕಳೆದ ಎರಡು ದಿನಗಳಿಂದ ಅನೇಕರು ಅಯೋಧ್ಯೆಗೆ ಬಂದು ತಲುಪಿದ್ದಾರೆ. ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ಮುನ್ನಾದ ದಿನವಾದ ಇಂದು ಎಲ್ಲೆಡೆಯ ಪ್ರಮುಖರು ವಿಶೇಷ ವಾಹನಗಳು, ವಿಮಾನಗಳು ಮೂಲಕ ಗಣ್ಯರು ಅಯೋಧ್ಯೆಗೆ ತೆರಳುತ್ತಿದ್ದಾರೆ. ಕರ್ನಾಟಕದಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಕುಟುಂಬ ಸಮೇತವಾಗಿ ಪ್ರಯಾಣ ಬೆಳೆಸಿದ್ದಾರೆ.
ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆಯಲಿರುವ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಾಜಿ ಪ್ರಧಾನಿಗಳು, ನನ್ನ ಪೂಜ್ಯ ತಂದೆಯವರಾದ ಹೆಚ್.ಡಿ.ದೇವೇಗೌಡರು, ಮಾತೃಶ್ರೀ ಚನ್ನಮ್ಮ ಅಮ್ಮನವರು ಹಾಗೂ ನನ್ನ ಪುತ್ರ, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಅಯೋಧ್ಯೆಗೆ ಪ್ರಯಾಣ ಬೆಳೆಸಿದ ಸಂದರ್ಭ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಮಾನದಲ್ಲಿರುವ ಫೋಟೋವನ್ನು ಸಾಮಾಜಿಕ ಜಾಲತಾಣದ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮತ್ತೊಂದೆಡೆ, ಹಿರಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಸಹ ಉತ್ತರ ಪ್ರದೇಶದ ಲಖನೌಗೆ ತಲುಪಿದ್ದಾರೆ. ಅಲ್ಲದೇ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಖ್ಯಾತ ನಟ ರಜನಿಕಾಂತ್, ಜನಸೇನಾ ಮುಖ್ಯಸ್ಥ, ನಟ ಪವನ್ ಕಲ್ಯಾಣ್, ಗಾಯಕ, ಸಂಯೋಜಕ ಶಂಕರ್ ಮಹಾದೇವನ್, ನಟಿ ಶೆಫಾಲಿ ಶಾ, ಹಿರಿಯ ನಟ ಅನುಪಮ್ ಖೇರ್, ನಟ ವಿವೇಕ್ ಒಬೆರಾಯ್, ನಟ ರಣದೀಪ್ ಹೂಡಾ ಮತ್ತು ಪತ್ನಿ ಲಿನ್ ಲೈಶ್ರಾಮ್ ಸೇರಿದಂತೆ ಹಲವರು ಖ್ಯಾತನಾಮರು ಸಹ ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ್ದಾರೆ.