ಪಾಟ್ನಾ(ಬಿಹಾರ):ಬಿಹಾರ ಪೊಲೀಸ್ ಇನ್ಸ್‌ಪೆಕ್ಟರ್ ಪರೀಕ್ಷೆಯಲ್ಲಿ ಮೂವರು ತೃತೀಯಲಿಂಗಿಗಳು ಉತ್ತೀರ್ಣರಾಗುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ದೇಶದ ಪೊಲೀಸ್ ಇಲಾಖೆಯಲ್ಲಿ ಇದೇ ಮೊದಲ ಬಾರಿಗೆ ತೃತೀಯಲಿಂಗಿಯೊಬ್ಬರು ಪಿಎಸ್ಐ ಆಗಿ ನೇಮಕವಾಗಿದ್ದಾರೆ. ಮಾನ್ವಿ ಮಧು ಕಶ್ಯಪ್ ಪೊಲೀಸ್ ಅಧಿಕಾರಿಯಾದ ಟ್ರಾನ್ಸ್‌ಜೆಂಡರ್.
ಪೊಲೀಸ್ ನೇಮಕಾತಿ ಪರೀಕ್ಷೆಯ 1275 ಹುದ್ದೆಗಳ ಫಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ ಮೂವರು ತೃತೀಯಲಿಂಗಿಗಳು ಆಯ್ಕೆಯಾಗಿದ್ದಾರೆ. ಭಾಗಲ್ಪುರದ ಹಳ್ಳಿಯೊಂದರ ನಿವಾಸಿ ಮಾನ್ವಿ ಮಧು ಕಶ್ಯಪ್ ಅವರು ತೇರ್ಗಡೆಯಾಗುವ ಮೂಲಕ ದೇಶದ ಮೊದಲ ತೃತೀಯಲಿಂಗಿ ಸಬ್ಇನ್ಸ್ಪೆಕ್ಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಈಟಿವಿ ಭಾರತ್ ಜೊತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ಮಾನ್ವಿ ಅವರು, ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದು, ಖುಷಿ ತಂದಿದೆ. ಶ್ರಮಕ್ಕೆ ಫಲ ಸಿಕ್ಕಿದೆ. ಸಮಾಜಕ್ಕೆ ಭಯಪಟ್ಟು ನಡೆಸುತ್ತಿದ್ದ ಜೀವನ ಮುಗಿದಿದೆ. ತಾನು ಇನ್ನು ಮುಂದೆ ತಲೆ ಎತ್ತಿಕೊಂಡು ಅಧಿಕಾರಿಯಾಗಿ ಜೀವನ ನಡೆಸುವೆ ಎಂದಿದ್ದಾರೆ.
ಇತಿಹಾಸ ಬರೆದ ಮಾನ್ವಿ:ತಾನು 9ನೇ ತರಗತಿಯಲ್ಲಿ ಓದುತ್ತಿದ್ದಾಗ ದೈಹಿಕವಾಗಿ ಬದಲಾವಣೆಗಳು ಕಂಡು ಬಂದವು. ಕ್ರಮೇಣ ಸಮಾಜದಿಂದ ದೂರವಾಗತೊಡಗಿದೆ. ತನಗೆ ಕುಟುಂಬದಲ್ಲಿ ಇಬ್ಬರು ಸಹೋದರಿಯರು, ಸಹೋದರ ಮತ್ತು ತಾಯಿ ಇದ್ದಾರೆ. ಕಳೆದ 9 ವರ್ಷಗಳಿಂದ ನಾನು ಮನೆಗೆ ಮನೆಗೆ ಹೋಗಿಲ್ಲ. ಈಗ ಇನ್ಸ್‌ಪೆಕ್ಟರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೇನೆ. ಅಧಿಕಾರಿಯಾಗಿ ನಾನು ಮನೆಗೆ ಭೇಟಿ ನೀಡುವೆ ಎಂದರು.
ಕಳೆದ ಒಂದೂವರೆ ವರ್ಷಗಳಿಂದ ಪೊಲೀಸ್ ಹುದ್ದೆಗಾಗಿ ನಿತ್ಯ ಸುಮಾರು 8 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಅಧ್ಯಯನ ನಡೆಸುತ್ತಿದ್ದೆ. ಮುಂಜಾನೆ ಕ್ರೀಡಾಂಗಣದಲ್ಲಿ ಒಂದೂವರೆ ಗಂಟೆಗಳ ಕಾಲ ದೈಹಿಕ ಕಸರತ್ತು ನಡೆಸುತ್ತಿದ್ದೆ. ಇದರ ಪರಿಣಾಮ ದೈಹಿಕ ಪರೀಕ್ಷೆಯಲ್ಲಿ 6 ನಿಮಿಷದ ಓಟವನ್ನು 4 ನಿಮಿಷ 34 ಸೆಕೆಂಡುಗಳಲ್ಲಿ ಮುಗಿಸಿದ್ದೆ. ಇದನ್ನು ಕಂಡು ಅಧಿಕಾರಿಗಳೇ ಅವಕ್ಕಾಗಿದ್ದರು ಎಂದು ಮಾನ್ವಿ ಹೇಳುತ್ತಾರೆ.
2022 ರಲ್ಲಿ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಹಾಕಿದ್ದೆ. ಆದರೆ, ಅನಾರೋಗ್ಯ ಕಾರಣ ತಪ್ಪಿಸಿಕೊಂಡಿದ್ದೆ. ಆ ವೇಳೆ ನಾನು ಶಸ್ತ್ರಚಿಕಿತ್ಸೆಗೂ ಒಳಗಾದೆ. 6 ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದೆ. ನಂತರ ಮತ್ತೆ ಪರೀಕ್ಷೆಯನ್ನು ತೆಗೆದುಕೊಳ್ಳಲು ಗುರು ರೆಹಮಾನ್ ಅವರ ಬಳಿ ಬಂದೆ. ಗುರು ರೆಹಮಾನ್ ಅವರು ಯಾವುದೇ ಶುಲ್ಕವಿಲ್ಲದೇ, ಅಧ್ಯಯನಕ್ಕೆ ಎಲ್ಲ ರೀತಿಯ ಸಾಮಗ್ರಿಗಳನ್ನು ಒದಗಿಸಿದರು. ಈ ಋಣ ನಾನು ಎಂದಿಗೂ ತೀರಿಸಲಾರೆ ಎಂದು ಸ್ಮರಿಸಿದರು.
ಗುರು ರೆಹಮಾನ್ ಹೇಳುವುದೇನು?:ದರೋಗಾ ಗುರು ಎಂದೇ ಖ್ಯಾತರಾಗಿರುವ ಶಿಕ್ಷಣ ತಜ್ಞ ಗುರು ರೆಹಮಾನ್ ಅವರು ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಅಭ್ಯಾಸ ಮಾಡಿದ ಹಲವರು ವಿವಿಧ ಹುದ್ದೆಗಳಿದ್ದಾರೆ. ಈ ಬಾರಿ ಮೂವರು ತೃತೀಯ ಲಿಂಗಿಗಳು ಇನ್ಸ್‌ಪೆಕ್ಟರ್ ಹುದ್ದೆ ಗಿಟ್ಟಿಸಿಕೊಂಡಿದ್ದು ವಿಶೇಷವಾಗಿದೆ. ನಮ್ಮಲ್ಲಿ ಇನ್ನೂ 26 ಟ್ರಾನ್ಸ್ಜೆಂಡರ್ಗಳು ವಿವಿಧ ಬ್ಯಾಚ್ಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ತೃತೀಯಲಿಂಗಿಗಳಿಗೆ ಉಚಿತ ಶಿಕ್ಷಣ ನೀಡುತ್ತೇವೆ. ಮಾನ್ವಿ ಮಧು ಕಶ್ಯಪ್ ತಮ್ಮ ಮೊದಲ ಪ್ರಯತ್ನದಲ್ಲಿಯೇ ಇನ್ಸ್‌ಪೆಕ್ಟರ್ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ್ದಾರೆ. ದೇಶದ ಮೊದಲ ಟ್ರಾನ್ಸ್‌ಜೆಂಡರ್ ಇನ್ಸ್‌ಪೆಕ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಧು ಈಗ ಅನೇಕ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಹೊಗಳಿದ್ದಾರೆ.
ಇದನ್ನೂ ಓದಿ:ರಾಷ್ಟ್ರೀಯ ಹೆದ್ದಾರಿ 10 ಬಂದ್ - ದಿನಕ್ಕೆ 100 ಕೋಟಿ ನಷ್ಟ: ಸಿಕ್ಕಿಂ ಸಿಎಂ ಪ್ರೇಮ್ ಸಿಂಗ್ - NH 10 Road closed