ನವದೆಹಲಿ:ಸಂಘರ್ಷ ಪೀಡಿತ ಮಣಿಪುರದಲ್ಲಿ ಶಾಂತಿ ಮರುಸ್ಥಾಪಿಸುವ ಪ್ರಯತ್ನದ ಭಾಗವಾಗಿ ದೆಹಲಿಯಲ್ಲಿ ಮೈಥೇಯಿ, ಕುಕಿ, ನಾಗಾ ಸಮುದಾಯಗಳ ಶಾಸಕರು ಮಂಗಳವಾರ ಸಭೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಸಂಘರ್ಷ ಶುರುವಾರ 17 ತಿಂಗಳ ಬಳಿಕ ಜನಪ್ರತಿನಿಧಿಗಳೂ ಮೊದಲ ಬಾರಿಗೆ ಸಭೆ ಸೇರಿದ್ದಾರೆ.
ರಾಜ್ಯದಲ್ಲಿ ಸಂಘರ್ಷಕ್ಕೆ ಕಾರಣವಾಗಿರುವ ಮೈಥೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಕೊನೆಗೊಳಿಸುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯ ಈ ಸಭೆ ಕರೆದಿದೆ.
ಸಭೆಗೆ ಮೈಥೇಯಿ ಸಮುದಾಯದ ಕಡೆಯಿಂದ ವಿಧಾನಸಭೆ ಸ್ಪೀಕರ್ ತೊಕ್ಚೋಮ್ ಸತ್ಯಬ್ರತ ಸಿಂಗ್, ಶಾಸಕ ತೊಂಗಮ್ ಬಿಸ್ವಜಿತ್ ಸಿಂಗ್, ಕುಕಿ ಸಮುದಾಯದಿಂದ ಸಚಿವರಾದ ಲೆಟ್ಪಾವೊ ಹಾಕಿಪ್ ಮತ್ತು ನೆಮ್ಚಾ ಕಿಪ್ಗೆನ್, ನಾಗಾ ಸಮುದಾಯದಿಂದ ಶಾಸಕರಾದ ರಾಮ್ ಮುಯಿವಾ, ಅವಾಂಗ್‌ಬೋ ನ್ಯೂಮೈ ಮತ್ತು ಎಲ್ ದಿಖೋ ಹಾಜರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಸಭೆಗೆ ಅವರು ಹಾಜರಾಗಿಲ್ಲ ಎಂಬುದು ವಿಶೇಷ.
ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಗೆ ಕುಕಿ ಮತ್ತು ಮೈಥೇಯಿ ಸಮುದಾಯಗಳ ನಡುವೆ ಮಾತುಕತೆಗಳು ಅಗತ್ಯವಿದೆ ಎಂದು ಅಮಿತ್ ಶಾ ಅವರು ಹೇಳಿದ ಸುಮಾರು ಒಂದು ತಿಂಗಳ ನಂತರ ಸಭೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಎರಡೂ ಸಮುದಾಯಗಳ ಜೊತೆಗೆ ಚರ್ಚೆ ನಡೆಸುತ್ತಿದೆ.