ಇಂಫಾಲ್: ಮಣಿಪುರದ ಕಾಂಗ್ ಪೋಕ್ಪಿ ಜಿಲ್ಲೆಯಲ್ಲಿ ಸೋಮವಾರ ಸಂಜೆಯಿಂದ ಕಾಣೆಯಾಗಿರುವ ಮೈಟಿ ಸಮುದಾಯದ ವ್ಯಕ್ತಿಯನ್ನು ಪತ್ತೆ ಹಚ್ಚಲು ಮತ್ತು ರಕ್ಷಿಸಲು ಸೇನೆಯು ತೀವ್ರ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದೆ ಎಂದು ರಕ್ಷಣಾ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಏತನ್ಮಧ್ಯೆ, ಗುಡ್ಡಗಾಡು ಕಾಂಗ್ ಪೋಕ್ಪಿ ಜಿಲ್ಲೆಯ ಗಡಿಯಲ್ಲಿರುವ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಉದ್ವಿಗ್ನತೆ ಮುಂದುವರೆದಿದೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಪಡೆದ ನಂತರ, ಸೇನೆಯು ತಕ್ಷಣವೇ ತನ್ನ ಎಲ್ಲ ಸಾಮರ್ಥ್ಯಗಳನ್ನು ಬಳಸಿ ವ್ಯಕ್ತಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಸಿಸಿಟಿವಿ ಫೀಡ್ಗಳನ್ನು ಎಚ್ಚರಿಕೆಯಿಂದ ಸ್ಕ್ಯಾನ್ ಮಾಡಲಾಗುತ್ತಿದೆ. ಕಾಣೆಯಾದ ವ್ಯಕ್ತಿಯ ಸಹೋದ್ಯೋಗಿಗಳೊಂದಿಗೆ ಮಾತನಾಡಲಾಗುತ್ತಿದೆ ಮತ್ತು ಟ್ರ್ಯಾಕರ್ ನಾಯಿಗಳು ಸೇರಿದಂತೆ ವಿವಿಧ ರೀತಿಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಪ್ರದೇಶಗಳನ್ನು ಕೂಲಂಕಷವಾಗಿ ಶೋಧಿಸಿದರೂ, ವ್ಯಕ್ತಿ ಅಥವಾ ಆತನ ದ್ವಿಚಕ್ರ ವಾಹನ ಇನ್ನೂ ಪತ್ತೆಯಾಗಿಲ್ಲ.
ಮೊಬೈಲ್ ಫೋನ್ ಕೂಡ ಸ್ವಿಚ್ಡ್ ಆಫ್ :ಅಸ್ಸಾಂನ ಕಚಾರ್ ಜಿಲ್ಲೆಯ ನಿವಾಸಿ ಮತ್ತು ಈಗ ಇಂಫಾಲ್ ಪಶ್ಚಿಮದ ಲೋಯಿಟಾಂಗ್ ಖುನೌ ಗ್ರಾಮದಲ್ಲಿ ವಾಸಿಸುತ್ತಿರುವ ಲೈಶ್ರಾಮ್ ಕಮಲ್ಬಾಬು ಸಿಂಗ್ (56) ಸೋಮವಾರ ಸಂಜೆ ತಾನು ಕೆಲಸ ಮಾಡುವ ಲೀಮಾಖಾಂಗ್ ಮಿಲಿಟರಿ ನಿಲ್ದಾಣಕ್ಕೆ ಹೊರಟಿದ್ದ. ಆದರೆ, ಆತ ಕಾಂಗ್ ಪೋಕ್ಪಿಯ ಸೇನಾ ಠಾಣೆಗೆ ತಲುಪಿಲ್ಲ. ಸಿಂಗ್ ಮನೆಯಿಂದ ಹೊರಟಾಗಿನಿಂದ ಆತನ ಮೊಬೈಲ್ ಫೋನ್ ಕೂಡ ಸ್ವಿಚ್ಡ್ ಆಫ್ ಆಗಿದೆ.
ವ್ಯಕ್ತಿಯು ಲೀಮಾಖಾಂಗ್ ಮಿಲಿಟರಿ ನಿಲ್ದಾಣದಲ್ಲಿ ಮಿಲಿಟರಿ ಎಂಜಿನಿಯರಿಂಗ್ ಸರ್ವೀಸಸ್ (ಎಂಇಎಸ್) ಗಾಗಿ ಕೆಲಸ ಮಾಡುವ ಗುತ್ತಿಗೆದಾರರ ಬಳಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದಾರೆ.