ಕರ್ನಾಟಕ

karnataka

ETV Bharat / bharat

ನೇತಾಜಿ ಜನ್ಮದಿನಕ್ಕೆ ರಾಷ್ಟ್ರೀಯ ರಜೆ ನೀಡಿ: ಕೇಂದ್ರ ಸರ್ಕಾರಕ್ಕೆ ಮಮತಾ ಬ್ಯಾನರ್ಜಿ ಆಗ್ರಹ - Netaji 128th birth anniversary

ನೇತಾಜಿ ಸುಭಾಶ್ಚಂದ್ರ ಬೋಸ್​ ಅವರ 128 ನೇ ಜನ್ಮದಿನವನ್ನು ಕೋಲ್ಕತ್ತಾದಲ್ಲಿ ಆಚರಿಸಲಾಯಿತು.

ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

By ETV Bharat Karnataka Team

Published : Jan 23, 2024, 3:31 PM IST

ಕೋಲ್ಕತ್ತಾ (ಪಶ್ಚಿಮಬಂಗಾಳ) :ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಸುಭಾಶ್ಚಂದ್ರ ಬೋಸ್​ ಅವರ ಸಾವಿನ ರಹಸ್ಯವನ್ನು ಭೇದಿಸುವ ಭರವಸೆ ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಮಾತು ತಪ್ಪಿದೆ. ಹೋರಾಟಗಾರನಿಗೆ ಅನ್ಯಾಯ ಮಾಡಿದೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದರು.

ಇಲ್ಲಿ ಹಮ್ಮಿಕೊಂಡಿದ್ದ ನೇತಾಜಿ ಅವರ 128 ನೇ ಜನ್ಮದಿನದ ಸಂಭ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನೇತಾಜಿ ಸಾವಿನ ರಹಸ್ಯವನ್ನು ಪತ್ತೆ ಮಾಡಲು ಆಯೋಗವನ್ನು ರಚಿಸಲಾಗಿದೆ. ಆದರೆ, ಈವರೆಗೂ ಯಾವುದೇ ಕಾರ್ಯಗಳು ನಡೆದಿಲ್ಲ. ನೇತಾಜಿ ಅವರ ಜನ್ಮದಿನವನ್ನು 'ರಾಷ್ಟ್ರೀಯ ರಜಾದಿನ' ಎಂದು ಘೋಷಿಸದ ಕೇಂದ್ರದ ವಿರುದ್ಧ ಅವರು ಕಿಡಿಕಾರಿದರು.

ಸಮಾಜವನ್ನು ಕಟ್ಟಿದ ನಿಜವಾದ ನಾಯಕ ನೇತಾಜಿ. ಇಡೀ ದೇಶಕ್ಕೆ ದಿಕ್ಕು ತೋರಿಸಿದ ವ್ಯಕ್ತಿಯನ್ನು ನಾವು ಮರೆಯುತ್ತಿದ್ದೇವೆ. ಅವರ ಕನಸಿನ ಕೂಸಾದ ಯೋಜನಾ ಆಯೋಗವನ್ನೇ ಇಲ್ಲವಾಗಿಸಿರುವುದು ದೇಶದ ದೌರ್ಭಾಗ್ಯ ಎಂದರು.

ಕೇಂದ್ರದ ವಿರುದ್ಧ ಟೀಕೆ:ನೇತಾಜಿ ನಾಪತ್ತೆ ರಹಸ್ಯವನ್ನು ಬಹಿರಂಗಪಡಿಸದ ಕೇಂದ್ರ ಸರ್ಕಾರವನ್ನು ಟೀಕಿಸಿದ ಮಮತಾ ಬ್ಯಾನರ್ಜಿ, ನಮ್ಮ ಸರ್ಕಾರ ನೇತಾಜಿಗೆ ಸಂಬಂಧಿಸಿದ 64 ಕಡತಗಳನ್ನು ಬಿಡುಗಡೆ ಮಾಡಿದೆ. ಅಧಿಕಾರಕ್ಕೆ ಬರುವ ಮೊದಲು ಬಿಜೆಪಿ ನೇತಾಜಿ ಅವರ ಸಾವಿನ ರಹಸ್ಯವನ್ನು ಬಯಲು ಮಾಡುತ್ತೇವೆ ಎಂದು ವಾಗ್ದಾನ ಮಾಡಿತ್ತು. ಆದರೆ, ಈವರೆಗೂ ಏನನ್ನೂ ಮಾಡಿಲ್ಲ ಎಂದು ಟೀಕಿಸಿದರು.

ದೇಶದಲ್ಲಿ ಯೋಜನಾ ಆಯೋಗ ಇರಬೇಕು ಎಂಬುದು ನೇತಾಜಿ ಅವರ ದೂರದೃಷ್ಟಿಯಾಗಿತ್ತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅದನ್ನೇ ರದ್ದು ಮಾಡಿದೆ. ಯೋಜನಾ ಆಯೋಗ ಇದ್ದಾಗ ಪ್ರತಿ ವರ್ಷವೂ ವಿವಿಧ ರಾಜ್ಯಗಳ ಅಧಿಕಾರಿಗಳು, ಮುಖ್ಯ ಕಾರ್ಯದರ್ಶಿಗಳ ಜತೆ ಸಭೆ ನಡೆಸಿ, ಎಲ್ಲಿ ಎಷ್ಟು ಹಣ ಕೊಡಬೇಕು ಎಂಬ ಬಗ್ಗೆ ಚರ್ಚೆಯಾಗುತ್ತಿತ್ತು. ಈಗ ಯೋಜನಾ ಆಯೋಗವೂ ಇಲ್ಲ, ಯೋಜನೆಯೂ ಇಲ್ಲವಾಗಿದೆ ಎಂದರು.

ನೀತಿ ಇಲ್ಲದ ಆಯೋಗವೇಕೆ?:ಜಾರಿಯಲ್ಲಿರುವ ನೀತಿ ಆಯೋಗವನ್ನು ಟೀಕಿಸಿದ ಮಮತಾ ಬ್ಯಾನರ್ಜಿ ಅವರು, ಈಗಿರುವ ನೀತಿ ಆಯೋಗಕ್ಕೆ ನೀತಿಯೇ ಇಲ್ಲ. ಜೊತೆಗೆ ಸರ್ಕಾರಕ್ಕೂ ಯಾವುದೇ ನೀತಿ ಇಲ್ಲ. ಹೀಗಿದ್ದಾಗ ಅದರ ಹೆಸರಿನ ಆಯೋಗವೇಕೆ. ಬರೀ ಕುತ್ತಿಗೆ ಅಲ್ಲಾಡಿಸುವ ಮೇಣದ ಗೊಂಬೆಯಂತೆ ಆಯೋಗ ಇದೆ ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ತಿಂಗಳಿಗೊಮ್ಮೆ ಮನ್​ ಕಿ ಬಾತ್​ ಹೆಸರಿನಲ್ಲಿ ಕಾರ್ಯಕ್ರಮ ನಡೆಸುತ್ತಾರೆಯೇ ಹೊರತು ಜನರ ಮನ್​ ಕಿ ಬಾತ್​ ಕೇಳುತ್ತಿಲ್ಲ ಎಂದು ದೂರಿದರು.

ಇದನ್ನೂ ಓದಿ:ಮಿಜೋರಾಂನಲ್ಲಿ ಮ್ಯಾನ್ಮಾರ್ ಸೇನಾ ವಿಮಾನ ಪತನ, 6 ಮಂದಿಗೆ ಗಾಯ

ABOUT THE AUTHOR

...view details