ನವದೆಹಲಿ:ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಬಿಭವ್ ಕುಮಾರ್ ಅವರು ಶುಕ್ರವಾರ ಉತ್ತರ ದೆಹಲಿ ಜಿಲ್ಲೆಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಸ್ವಾತಿ ಮಾಲಿವಾಲ್ ವಿರುದ್ಧ ಇಮೇಲ್ ಮೂಲಕ ದೂರು ದಾಖಲಿಸಿದ್ದರು. ಸಿಎಂ ನಿವಾಸಕ್ಕೆ ಬಲವಂತವಾಗಿ ನುಗ್ಗಿ ಮುಖ್ಯಮಂತ್ರಿ ಭದ್ರತೆಗೆ ಧಕ್ಕೆ ತರುವಂತಹ ಹಲವು ಆರೋಪಗಳನ್ನು ಸ್ವಾತಿ ವಿರುದ್ಧ ಇಮೇಲ್ ಮೂಲಕ ಮಾಡಿದ್ದರು.
ಆದರೆ, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವ ಬಗ್ಗೆ ದೆಹಲಿ ಪೊಲೀಸರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದಕ್ಕೂ ಮೊದಲು, ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಾಲಿವಾಲ್ ಪರವಾಗಿ ಬಿಭವ್ ಕುಮಾರ್ ವಿರುದ್ಧ ಹಲ್ಲೆ ಮತ್ತು ದುರ್ವರ್ತನೆ ಆರೋಪದ ಮೇಲೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಬಿಭವ್ ವಿರುದ್ಧ ಪ್ರಕರಣ ದಾಖಲಿಸುವುದರೊಂದಿಗೆ, ಸಿಆರ್‌ಪಿಸಿಯ ಸೆಕ್ಷನ್ 164 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆಗಳನ್ನು ಸಹ ದಾಖಲಿಸಲಾಗಿದೆ.
ದೆಹಲಿ ಪೊಲೀಸರಿಗೆ ಬಿಭವ್ ಕಳುಹಿಸಿರುವ ಇಮೇಲ್ ದೂರಿನ ಕುರಿತು ಮಾತನಾಡುವುದಾದ್ರೆ, ಅದರಲ್ಲಿ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ. ಸ್ವಾತಿ ಮಾಲಿವಾಲ್ ಅವರನ್ನು ಸಿಎಂ ನಿವಾಸದಿಂದ ಹೊರಗೆ ಬರುವಂತೆ ಹೇಳಿದಾಗ ನನ್ನನ್ನು ತಳ್ಳಲು ಪ್ರಾರಂಭಿಸಿದರು ಎಂದು ಬಿಭವ್ ಕುಮಾರ್ ಆರೋಪಿಸಿದ್ದಾರೆ. ಅಲ್ಲದೇ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರಂತೆ. ದೆಹಲಿ ಪೊಲೀಸರಿಗೆ ಬಿಭವ್ ಅವರು ಕಳುಹಿಸಿರುವ ಇಮೇಲ್‌ನಲ್ಲಿ ಸ್ವಾತಿ ಮಾಲಿವಾಲ್ ವಿರುದ್ಧ ಬಲವಂತವಾಗಿ ಮನೆಗೆ ನುಗ್ಗಿ ಮುಖ್ಯಮಂತ್ರಿಯ ಭದ್ರತೆಗೆ ಅಪಾಯ ತರುವಂತಹ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ.
ಬಿಭವ್ ಈ ಸಂಪೂರ್ಣ ವಿಷಯವನ್ನು ತಮ್ಮ ಇಮೇಲ್‌ನಲ್ಲಿ 11 ಅಂಶಗಳಲ್ಲಿ ಉಲ್ಲೇಖಿಸಿದ್ದಾರೆ. ದೂರಿನಲ್ಲಿ ಸ್ವಾತಿ ಮಾಲಿವಾಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಿಭವ್ ದೆಹಲಿ ಪೊಲೀಸರನ್ನು ಒತ್ತಾಯಿಸಿದ್ದಾರೆ. ಆದರೂ ಈ ಇಮೇಲ್ ದೂರಿನ ಬಗ್ಗೆ ಪೊಲೀಸರಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಕುರಿತು ದೆಹಲಿ ಪೊಲೀಸರು ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ಪಡೆಯಲು ಪ್ರಯತ್ನಿಸಲಾಗಿದೆ.
ಈ ಇಮೇಲ್ ದೂರನ್ನು ಸಿಎಂ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಅವರು ಉತ್ತರ ದೆಹಲಿ ಜಿಲ್ಲಾ ಪೊಲೀಸ್ ಉಪ ಕಮಿಷನರ್ ಮತ್ತು ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ಮುಖ್ಯಸ್ಥರಿಗೆ ಕಳುಹಿಸಿದ್ದಾರೆ. ಅನುಮತಿ ಪಡೆಯದೆ ಸ್ವಾತಿ ಮಾಲಿವಾಲ್ ಸಿಎಂ ನಿವಾಸಕ್ಕೆ ಪ್ರವೇಶಿಸಿದ್ದಾರೆ ಎಂದು ದೂರಲಾಗಿದೆ. ಸ್ವಾತಿಯನ್ನು ವೇಟಿಂಗ್ ಏರಿಯಾದಲ್ಲಿ ಕಾಯಲು ಕೇಳಲಾಯಿತು. ಮುಖ್ಯಮಂತ್ರಿ ನಿವಾಸದ ಸಂಕೀರ್ಣದಲ್ಲಿಯೇ ನಿರೀಕ್ಷಣಾ ಸ್ಥಳವಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪದೇ ಪದೇ ಮನವಿ ಮಾಡಿದರೂ ಒಪ್ಪಲು ಸಿದ್ಧವಾಗದೆ ನಿಂದಿಸತೊಡಗಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸ್ವಾತಿ ಮಾಲಿವಾಲ್ ಅವರು ಸಿಎಂ ನಿವಾಸಕ್ಕೆ ಬಂದಾಗ, ಅವರ ಗುರುತನ್ನು ಕೇಳಲಾಯಿತು ಮತ್ತು ಅವರು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಎಂದು ಹೇಳಿದರು. ಇದಾದ ನಂತರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೂ ಅಪಾಯಿಂಟ್‌ಮೆಂಟ್ ಇದೆ ಎಂದು ಅವರ ಕಡೆಯಿಂದ ಹೇಳಲಾಗಿದೆ. ಆದರೆ ಪರಿಶೀಲಿಸಿದಾಗ ಅವರಿಗೆ ಸಿಎಂ ಭೇಟಿಯೇ ಇಲ್ಲದಿರುವುದು ಕಂಡುಬಂದಿದೆ. ಇದಾದ ಬಳಿಕ ಸಿಎಂ ಭೇಟಿಗೆ ನಿರಾಕರಿಸಲಾಗಿತ್ತು. ಈ ವಿನಂತಿಯನ್ನು ಮಾಡಿದಾಗ, ಸ್ವಾತಿ ಮಾಲಿವಾಲ್ ಅವರಿಂದ ನಿರಂತರವಾಗಿ ಬೆದರಿಕೆಗಳು ಬಂದವು. ಸಿಎಂ ಭೇಟಿಗೆ ಅವಕಾಶ ನೀಡದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಈ ವೇಳೆ ನೌಕರರಿಗೂ ಬೆದರಿಕೆ ಹಾಕಲಾಗಿದೆ ಎಂದು ಬಿಭವ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಓದಿ:ದೇಶದಲ್ಲಿ ಹೆಚ್ಚುತ್ತಿದೆ ಹ್ಯಾಕಿಂಗ್; ನಾಲ್ವರಲ್ಲಿ ಒಬ್ಬರ ಮೇಲೆ ಸೈಬರ್ ದಾಳಿ! - Indians faced hacking attacks