ಮುಂಬೈ (ಮಹಾರಾಷ್ಟ್ರ):2024ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ 'ಮಹಾಯುತಿ' ಮೈತ್ರಿಯು ಅಭೂತಪೂರ್ವ ಜಯಭೇರಿ ಬಾರಿಸಿದೆ. ಬಿಜೆಪಿ ನೇತೃತ್ವದ ಮೈತ್ರಿಗೆ ರಾಜ್ಯದ ಜನರು ಏಕಮೇವ ಬಹುಮತ ನೀಡಿದ್ದಾರೆ. ಇದರ ಪರಿಣಾಮ, ವಿಪಕ್ಷಗಳಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ಪಡೆಯುವ ಅರ್ಹತೆಯೇ ಇಲ್ಲವಾಗಿದೆ.
ಶನಿವಾರ (ನವೆಂಬರ್ 23) ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯು 288 ವಿಧಾನಸಭಾ ಸ್ಥಾನಗಳಲ್ಲಿ 230 ರಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್, ಎನ್‌ಸಿಪಿ (ಶರದ್ ಪವಾರ್), ಶಿವಸೇನೆ (ಉದ್ಧವ್ ಠಾಕ್ರೆ) ಬಣ ಸೇರಿದಂತೆ ಉಳಿದವರಿಗೆ 58 ಸ್ಥಾನ ಸಿಕ್ಕಿದೆ. ವಿಪರ್ಯಾಸವೆಂದರೆ, ಯಾವೊಂದು ಪಕ್ಷಕ್ಕೂ ವಿಪಕ್ಷ ನಾಯಕನ ಸ್ಥಾನ ಪಡೆಯುವಷ್ಟು ಬಲ ಇಲ್ಲ.
ವಿಪಕ್ಷ ಸ್ಥಾನಕ್ಕೆ ಎಷ್ಟು ಸೀಟು ಬೇಕು?:ಯಾವುದೇ ವಿಧಾನಸಭೆಯ ವಿಪಕ್ಷ ನಾಯಕನ ಸ್ಥಾನ ಪಡೆದುಕೊಳ್ಳಲು ಪಕ್ಷಗಳು ಒಟ್ಟಾರೆ ಸ್ಥಾನಗಳಲ್ಲಿ ಕನಿಷ್ಠ ಶೇಕಡಾ 10 ರಷ್ಟು ಸೀಟುಗಳನ್ನು ಗೆಲ್ಲಬೇಕು. ಮಹಾರಾಷ್ಟ್ರ ವಿಧಾನಸಭೆ 288 ಸ್ಥಾನಗಳನ್ನು ಹೊಂದಿದೆ. ಇದರಿಂದ ಕನಿಷ್ಠ 29 ಸ್ಥಾನವನ್ನು ಗೆದ್ದ ಪಕ್ಷಕ್ಕೆ ಎಲ್ಒಪಿ ಸ್ಥಾನ ಸಿಗಲಿದೆ. ರಾಜ್ಯ ಶಾಸಕಾಂಗ ಕಾಯಿದೆ ಪ್ರಕಾರ, ವಿರೋಧ ಪಕ್ಷದ ನಾಯಕರ ಸಂಬಳ ಮತ್ತು ಭತ್ಯೆಗಳನ್ನು ಪಡೆಯಲು ಸಾಧ್ಯ.
ಚುನಾವಣಾ ಆಯೋಗದ ಪ್ರಕಾರ, ವಿರೋಧ ಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಯ ಭಾಗವಾಗಿರುವ ಉದ್ಧವ್ ಠಾಕ್ರೆ ಬಣದ ಶಿವಸೇನೆ ಅತಿ ಹೆಚ್ಚು ಅಂದರೆ 20 ಸ್ಥಾನ ಗೆದ್ದಿದೆ. ಇದು ಕೂಡ 9 ಸ್ಥಾನದಷ್ಟು ಕಡಿಮೆಯಿದೆ. ಕಾಂಗ್ರೆಸ್ 16, ಶರದ್ ಪವಾರ್ ಅವರ ಎನ್‌ಸಿಪಿ ಕೇವಲ 10 ಸ್ಥಾನ ಗೆದ್ದಿದೆ. ಅಂದರೆ, ಯಾವುದೇ ಪಕ್ಷವೂ ವಿಪಕ್ಷ ಸ್ಥಾನದ ಅರ್ಹತೆ ಗಳಿಸಿಲ್ಲ.