ಚಂಡೀಗಢ:ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಹತ್ಯೆ ಮಾಡಿದ್ದಇಬ್ಬರ ಪೈಕಿ ಒಬ್ಬರ ಪುತ್ರ ಪಂಜಾಬ್‌ನ ಫರೀದ್‌ಕೋಟ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. 45 ವರ್ಷದ ಸರಬ್ಜಿತ್ ಸಿಂಗ್ ಅವರು ಪಂಜಾಬ್‌ನ ಫರೀದ್‌ಕೋಟ್ ಕ್ಷೇತ್ರದಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಗುರುವಾರ ಹೇಳಿದ್ದಾರೆ.
ಫರೀದ್‌ಕೋಟ್‌ನಿಂದ ಚುನಾವಣೆಗೆ ಸ್ಪರ್ಧಿಸಲು ಅನೇಕರು ತನಗೆ ಆಫರ್ ಮಾಡಿದ್ದಾರೆ. ಆದರೆ, ನಾನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಸರಬ್ಜಿತ್ ಹೇಳಿದರು. ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಇಬ್ಬರು ಹಂತಕರಲ್ಲಿ ಒಬ್ಬರಾದ ಬಿಯಾಂತ್ ಸಿಂಗ್ ಅವರ ಮಗ. ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಆಗಿನ ಪ್ರಧಾನಿಯ ಅಂಗರಕ್ಷಕರಾಗಿದ್ದರು. ಅವರು 31 ಅಕ್ಟೋಬರ್ 1984 ರಂದು ಪ್ರಧಾನಿ ನಿವಾಸದಲ್ಲಿ ಇಂದಿರಾ ಗಾಂಧಿ ಅವರನ್ನು ಹತ್ಯೆ ಮಾಡಿದ್ದರು. ಸರಬ್ಜಿತ್ ಸಿಂಗ್ ಅವರು 2004 ರ ಲೋಕಸಭಾ ಚುನಾವಣೆಯಲ್ಲಿ ಬಟಿಂಡಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಆಗ ಅವರು 1.13 ಲಕ್ಷ ಮತಗಳನ್ನು ಪಡೆದುಕೊಂಡಿದ್ದರು ಎಂಬುದು ಗಮನಾರ್ಹ. 2007 ರಲ್ಲಿ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಬರ್ನಾಲಾದ ಭದೌರ್ ಕ್ಷೇತ್ರದಿಂದ ಸ್ಪರ್ಧಿಸಿ ಆಗಲೂ ಸೋಲು ಕಂಡಿದ್ದರು.