ನವದೆಹಲಿ:ದೇಶ ಸ್ವತಂತ್ರವಾದ ಬಳಿಕ 1951ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಹಿಡಿದು ಇಲ್ಲಿಯುವರೆಗೂ ನಡೆದ 17 ಲೋಕಸಭೆ ಚುನಾವಣೆಗಳಲ್ಲಿ 71 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಆಯಾ ಕ್ಷೇತ್ರದಲ್ಲಿ ಬಿದ್ದ 6/1 ರಷ್ಟು (ಆರನೇ ಒಂದು ಭಾಗದಷ್ಟು) ಮತಗಳನ್ನು ಪಡೆಯಲೂ ಅಭ್ಯರ್ಥಿಗಳು ವಿಫಲವಾಗಿರುವ ಮಹತ್ವದ ಅಂಶ ಬಯಲಾಗಿದೆ.
ಮೊದಲ ಲೋಕಸಭಾ ಚುನಾವಣೆಯಿಂದ 2019ರ 17ನೇ ಲೋಕಸಭೆ ಚುನಾವಣೆಯಲ್ಲಿ 91,160 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಇದರಲ್ಲಿ 71,246 ಮಂದಿ ತಮ್ಮ ಭದ್ರತಾ ಠೇವಣಿ ಕಳೆದುಕೊಂಡಿದ್ದಾರೆ. ಅಂದರೆ ಒಟ್ಟು ಶೇಕಡಾ 78ರಷ್ಟು ಮಂದಿ ಜನರಿಂದ ತಿರಸ್ಕೃತರಾಗಿದ್ದಾರೆ. ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಬಹಿರಂಗ ಮಾಡಿದ ಅಂಕಿಅಂಶಗಳಲ್ಲಿ ಕಂಡುಬಂದಿದೆ.
ಚುನಾವಣಾವಾರು ಠೇವಣಿ ನಷ್ಟ:1951-52ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಸುಮಾರು 40 ಪ್ರತಿಶತದಷ್ಟು ಅಂದರೆ, 1,874 ಅಭ್ಯರ್ಥಿಗಳಲ್ಲಿ 745 ಅಭ್ಯರ್ಥಿಗಳು ತಮ್ಮ ಠೇವಣಿಗಳನ್ನು ಕಳೆದುಕೊಂಡರು. 1996ರ 11ನೇ ಲೋಕಸಭೆ ಚುನಾವಣೆಯಲ್ಲಿ ಈ ಪ್ರಮಾಣ ಭಾರೀ ಹೆಚ್ಚಿತು. ಸ್ಪರ್ಧಿಸಿದ 13,952 ಅಭ್ಯರ್ಥಿಗಳಲ್ಲಿ 12,688 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು. ಅಂದರೆ, ಇದರ ಪ್ರಮಾಣ ಶೇಕಡಾ 91. ವಿಶೇಷವೆಂದರೆ, ಲೋಕಸಭೆ ಇತಿಹಾಸದಲ್ಲೇ ಅತಿ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ ಚುನಾವಣೆ ಇದಾಗಿತ್ತು.
1991-92ರಲ್ಲಿ, 8,749 ಸ್ಪರ್ಧಿಗಳಲ್ಲಿ 7,539 ಅಭ್ಯರ್ಥಿಗಳು ತಮ್ಮ ಭದ್ರತಾ ಠೇವಣಿ ಕಳೆದುಕೊಂಡರು. ಶೇಕಡಾ 86 ಅಭ್ಯರ್ಥಿಗಳು ಠೇವಣಿ ನಷ್ಟ ಹೊಂದಿದ್ದರು. 2009ರಲ್ಲಿ 8,070 ರಲ್ಲಿ 6,829 ಅಭ್ಯರ್ಥಿಗಳು (ಶೇಕಡಾ 85) ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರೆ, 2014ರ ಚುನಾವಣೆಯಲ್ಲಿ 8,251 ಅಭ್ಯರ್ಥಿಗಳಲ್ಲಿ 7 ಸಾವಿರ (ಶೇ.84) ಮಂದಿ ಭದ್ರತಾ ಠೇವಣಿ ಕಳೆದುಕೊಂಡರು.
1957ರ ಚುನಾವಣೆಯಲ್ಲಿ 919 ಅಭ್ಯರ್ಥಿಗಳಲ್ಲಿ ಕೇವಲ 130 ಅಥವಾ ಶೇಕಡಾ 14 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದು, ಅತಿ ಕಡಿಮೆ ನಷ್ಟವಾಗಿದೆ. 1977 ರ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಅತ್ಯುತ್ತಮ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಏಕೆಂದರೆ ಆ ಪಕ್ಷಗಳ 1,060 ಅಭ್ಯರ್ಥಿಗಳಲ್ಲಿ 100 ಅಭ್ಯರ್ಥಿಗಳು (ಶೇಕಡಾ 9) ಮಾತ್ರ ಠೇವಣಿ ಕಳೆದುಕೊಂಡಿದ್ದರು. 1951-52ರ ಮೊದಲ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ 1,217 ಅಭ್ಯರ್ಥಿಗಳಲ್ಲಿ 344 ಮಂದಿ (ಶೇ.28) ಠೇವಣಿ ಕಳೆದುಕೊಂಡಿದ್ದರು.