ನವದೆಹಲಿ: ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ರಣಾವತ್ ಅವರ ವಿರುದ್ಧ ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿ (ಹೆಚ್ಪಿಸಿಸಿ) ಅಧ್ಯಕ್ಷೆ ಹಾಗೂ ಹಾಲಿ ಸಂಸದೆ ಪ್ರತಿಭಾ ಸಿಂಗ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಪ್ರತಿಭಾ ಸಿಂಗ್ ಅವರ ಆಪ್ತರ ಪ್ರಕಾರ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪ್ರತಿಭಾ ಸಿಂಗ್ ಅವರು ಘೋಷಿಸಿದ್ದ ಕೆಲವು ದಿನಗಳಲ್ಲಿಯೇ, ಬಿಜೆಪಿಯ ಅಭ್ಯರ್ಥಿಯ ವಿರುದ್ಧ ಸೆಣೆಸಲು ಉತ್ಸುಕರಾಗಿದ್ದಾರೆ. ಅವರು ಚುನಾವಣೆಯಲ್ಲಿ ಕಣಕ್ಕಿಳಿಯುವ ಬಗ್ಗೆ ಹೈಕಮಾಂಡ್ನೊಂದಿಗೆ ಚರ್ಚಿಸಲು ನಿರ್ಧರಿಸಿದ್ದಾರೆ ಮತ್ತು ಸ್ಪರ್ಧಿಸಲು ಸಿದ್ಧರಾಗಿದ್ದಾರೆ ಎಂದು ತಿಳಿಸಿವೆ.
ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಅವರು ತಮ್ಮ ದಿವಂಗತ ಪತಿಯ ರಾಜಕೀಯ ಪರಂಪರೆಯನ್ನು ಹೊಂದಿದ್ದಾರೆ. ಅವರು 2021ರಲ್ಲಿ ಲೋಕಸಭಾ ಉಪಚುನಾವಣೆಯಲ್ಲಿ ಮಂಡಿ ಕ್ಷೇತ್ರದಿಂದ ಗೆದ್ದಿದ್ದರು. ಇದಕ್ಕೂ ಮೊದಲು 2019ರಲ್ಲಿ ಬಿಜೆಪಿ ಎಲ್ಲಾ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಗೆದ್ದಿತ್ತು. ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 2022 ರಲ್ಲಿ ಹಿಮಾಚಲ ಪ್ರದೇಶದಲ್ಲಿ ಪಕ್ಷದ ನೇತೃತ್ವವನ್ನು ಪ್ರತಿಭಾ ಸಿಂಗ್ ಅವರಿಗೆ ವಹಿಸಿದ್ದರು. ಮತ್ತೊಂದೆಡೆ, ಪಕ್ಷ ನಿರ್ಧರಿಸಿದರೆ ಅವರು ಮಂಡಿ ಕ್ಷೇತ್ರಕ್ಕೆ ಪ್ರತಿಭಾ ಸಿಂಗ್ ಉತ್ತಮ ಅಭ್ಯರ್ಥಿಯಾಗುತ್ತಾರೆ. ಅವರು ರಾಜ್ಯ ಘಟಕದ ಮುಖ್ಯಸ್ಥೆ ಮತ್ತು ಹಾಲಿ ಸಂಸದೆಯಾಗಿದ್ದಾರೆ ಎಂದು ಹಿರಿಯ ಸಚಿವ ರಾಜೇಶ್ ಧರ್ಮಾನಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಯನ್ನು ಮಣಿಸಿತ್ತು. ಆದರೆ ಇತ್ತೀಚೆಗೆ ಆರು ಬಂಡಾಯ ಶಾಸಕರು ಪಕ್ಷದ ರಾಜ್ಯಸಭಾ ನಾಮನಿರ್ದೇಶಿತ ಅಭಿಷೇಕ್ ಮನು ಸಿಂಘ್ವಿ ವಿರುದ್ಧ ಮತ ಚಲಾಯಿಸಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಸರ್ಕಾರಕ್ಕೆ ಶಾಕ್ ನೀಡಿದ್ದರು. ನಂತರ ಬಂಡಾಯ ಕಾಂಗ್ರೆಸ್ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು. ಇತ್ತೀಚೆಗೆ ಬಂಡಾಯ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದರು.