ನವದೆಹಲಿ: ಭಾರತೀಯ ಜನತಾ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯನ್ನು ನಾಳೆ ಬಿಡುಗಡೆ ಮಾಡಲಿದೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಅದು ತನ್ನ ಚುನಾವಣಾ ಪ್ರಣಾಳಿಕೆಗೆ "ಸಂಕಲ್ಪ ಪತ್ರ" ಎಂದು ಕರೆದಿದೆ. ಏಪ್ರಿಲ್ 14 ರಂದು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ಪ್ರಣಾಳಿಕೆ ಸಮಿತಿ ಈಗಾಗಲೇ ಎರಡು ಸಭೆಗಳನ್ನು ನಡೆಸಿದೆ. ಬಿಜೆಪಿ ತನ್ನ ಪ್ರಣಾಳಿಕೆಗಾಗಿ 1.5 ಮಿಲಿಯನ್ ಸಲಹೆಗಳನ್ನು ಸ್ವೀಕರಿಸಿದೆ, ಇದರಲ್ಲಿ 400,000ಕ್ಕೂ ಹೆಚ್ಚು ಸಲಹೆಗಳನ್ನು NaMo ಅಪ್ಲಿಕೇಶನ್ ಮೂಲಕ ಸ್ವೀಕರಿಸಿದರೆ, 1.1 ಮಿಲಿಯನ್ ವಿಡಿಯೋಗಳ ಮೂಲಕವೂ ನಾನಾ ಸಲಹೆಗಳು ಬಂದಿವೆ.
ಪಕ್ಷದ ಮೂಲಗಳ ಪ್ರಕಾರ, ಬಿಜೆಪಿಯ ಪ್ರಣಾಳಿಕೆಯು ಅಭಿವೃದ್ಧಿ, ಸಮೃದ್ಧ ಭಾರತ, ಮಹಿಳೆಯರು, ಯುವಕರು, ಬಡವರು ಮತ್ತು ರೈತರನ್ನು ಕೇಂದ್ರೀಕರಿಸಿ ರಚನೆ ಮಾಡಲಾಗುತ್ತದೆ. ಸಾಧಿಸಬಹುದಾದ ಭರವಸೆಗಳನ್ನು ಮಾತ್ರ ಈ ಬಾರಿ ಜನರ ಮುಂದಿಡಲು ಪಕ್ಷ ನಿರ್ಧರಿಸಿದೆ ಎನ್ನಲಾಗಿದೆ. ಪ್ರಣಾಳಿಕೆಯ ವಿಷಯವು ’ಮೋದಿ ಗ್ಯಾರಂಟಿ ಅಭಿವೃದ್ಧಿ ಹೊಂದಿದ ಭಾರತ 2047‘‘ ಎಂಬ ಮುಖ್ಯ ಧ್ಯೇಯವನ್ನು ಇಟ್ಟುಕೊಂಡು ಹೊರ ಬರಲಿದೆ. ಅಷ್ಟೇ ಅಲ್ಲ ಆರ್ಥಿಕ ಅಭಿವೃದ್ಧಿ ಜತೆ ಜತೆಗೆ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಕೇಂದ್ರೀಕರಿಸಿ ಈ ಬಾರಿಯ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ.