ಹೈದರಾಬಾದ್:ಲೋಕಸಭೆ ಚುನಾವಣೆಗೆ ಏಪ್ರಿಲ್ 19 ರಂದು (ಶುಕ್ರವಾರ) ಮೊದಲ ಸುತ್ತಿನ ಮತದಾನಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ. ಮೊದಲ ಹಂತದಲ್ಲಿ 21 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮತದಾನಕ್ಕೆ ಬಳಸುವ ಇವಿಎಂಗಳ ಬಗ್ಗೆ ಅನೇಕರಿಗೆ ಹಲವು ಅನುಮಾನಗಳಿವೆ.
ಇವಿಎಂ ಎಂದರೆ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್. ಇದು ಮುಖ್ಯವಾಗಿ ಎರಡು ಭಾಗಗಳನ್ನು ಒಳಗೊಂಡಿದೆ. ಒಂದು ಘಟಕವನ್ನು ಬ್ಯಾಲೆಟ್ ಯೂನಿಟ್ (ಬಿಯು) ಎಂದು ಕರೆದರೆ, ಇನ್ನೊಂದನ್ನು ಕಂಟ್ರೋಲ್ ಯುನಿಟ್ (ಸಿಯು) ಎನ್ನಲಾಗುತ್ತದೆ. ನಾವು ಮತ ಹಾಕುವ ಇವಿಎಂ ಯಂತ್ರವನ್ನು ಬ್ಯಾಲೆಟ್ ಯುನಿಟ್ (ಬಿಯು) ನಿಯಂತ್ರಿಸುತ್ತದೆ. ಇದನ್ನು ವಿಶೇಷ ಸ್ಥಳದಲ್ಲಿ ಸ್ಥಾಪಿಸಲಾಗಿರುತ್ತದೆ. ಅಲ್ಲಿಗೆ ಹೋಗಿ ಗೌಪ್ಯ ಮತ ಚಲಾಯಿಸಬೇಕು.
ಇದರ ಪೂರ್ಣ ನಿಯಂತ್ರಣವು ಪ್ರಿಸೈಡಿಂಗ್ ಅಧಿಕಾರಿ ಅಥವಾ ಮತಗಟ್ಟೆ ಅಧಿಕಾರಿಯ ಬಳಿ ಇರುತ್ತದೆ. ಇದಕ್ಕೆ ಬ್ಯಾಲೆಟ್ ಯೂನಿಟ್ ಮತ್ತು ಕಂಟ್ರೋಲ್ ಯೂನಿಟ್ ಅನ್ನು 5 ಮೀಟರ್ ಉದ್ದದ ಕೇಬಲ್ ಮೂಲಕ ಸಂಪರ್ಕಿಸಲಾಗಿರುತ್ತದೆ. ಇದರಲ್ಲಿ ಎಷ್ಟು ಮಂದಿ ಮತ ಚಲಾಯಿಸಿದ್ದಾರೆ ಎಂಬುದನ್ನ ಕಾಲಕಾಲಕ್ಕೆ ನಿಯಂತ್ರಣ ಯೂನಿಟ್ ತೋರಿಸುತ್ತದೆ. ಇವುಗಳ ಜತೆಗೆ ‘ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್’ (ವಿವಿ ಪ್ಯಾಟ್) ಯಂತ್ರವೂ ಜೊತೆಗಿರುತ್ತದೆ. ಇದರ ಕೆಲಸವೆಂದರೆ, ನಾವು ಇವಿಎಂನಲ್ಲಿ ಮತ ಚಲಾಯಿಸಿದಾಗ, ವಿವಿ ಪ್ಯಾಟ್‌ನಲ್ಲಿನ ಸ್ಲಿಪ್ನಲ್ಲಿ ಅದು ಮುದ್ರಿತವಾಗಿ ಕೆಳಗೆ ಇರಿಸಲಾದ ಬಾಕ್ಸ್‌ನಲ್ಲಿ ಬೀಳುತ್ತದೆ. ಇವಿಎಂಗಳು ಬ್ಯಾಟರಿ ಚಾಲಿತವಾಗಿದ್ದು, ವಿದ್ಯುತ್ನ ಅಗತ್ಯವಿಲ್ಲ. ವಿದ್ಯುತ್ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಬಳಕೆಗೆ ಯೋಗ್ಯವಾಗಿವೆ.
ಇವಿಎಂ ಕೆಟ್ಟು ನಿಂತರೆ ಏನಾಗುತ್ತದೆ?:ಮತದಾನ ನಡೆಯುತ್ತಿರುವಾಗ ಇವಿಎಂ ಏಕಾಏಕಿ ಅರ್ಧದಲ್ಲಿ ಕೆಟ್ಟು ನಿಂತರೆ, ಹಾಕಿದ ಮತಗಳು ಏನಾಗುತ್ತವೆ ಎಂಬುದು ಎಲ್ಲರಲ್ಲಿ ಮೂಡುವ ಪ್ರಶ್ನೆ. ಹೀಗಾದಾಗ ಭಯದ ಚಿಂತೆಯೇ ಬೇಡ. ಇವಿಎಂನಲ್ಲಿರುವ ಬ್ಯಾಲೆಟ್ ಯೂನಿಟ್ ಮತ್ತು ಕಂಟ್ರೋಲ್ ಯೂನಿಟ್ಗಳು ತಾಂತ್ರಿಕವಾಗಿ ಕೆಲಸ ಮಾಡದಿದ್ದರೆ, ಅಲ್ಲಿಯವರೆಗೂ ಮತದಾರರು ಚಲಾಯಿಸಿದ ಎಲ್ಲ ಮತಗಳು ಕಂಟ್ರೋಲ್ ಯೂನಿಟ್ನಲ್ಲಿ ಸೇವ್ ಆಗಿರುತ್ತವೆ. ಅಲ್ಲಿಂದ ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಹುದು. ಹಾಗೊಂದು ವೇಳೆ ಕಂಟ್ರೋಲ್ ಯೂನಿಟ್ ಕೂಡ ಕೈಕೊಟ್ಟಲ್ಲಿ ವಿವಿ ಪ್ಯಾಟ್ ಯಂತ್ರದಲ್ಲಿನ ಚೀಟಿಗಳಲ್ಲಿ ನಿಮ್ಮ ಮತ ಅಡಕವಾಗಿರುತ್ತದೆ.