ಸಿಲ್ಚಾರ್(ಅಸ್ಸಾಂ): ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಅಸ್ಸಾಂನ ಬರಾಕ್ ಕಣಿವೆಯಲ್ಲಿರುವ ಎರಡು ಲೋಕಸಭಾ ಕ್ಷೇತ್ರಗಳಾದ ಸಿಲ್ಚಾರ್ (ಪರಿಶಿಷ್ಟ ಜಾತಿ) ಮತ್ತು ಕರೀಮ್‌ಗಂಜ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಹುದೊಡ್ಡ ಸಮಸ್ಯೆಯಾಗಿದೆ. ಆದಷ್ಟು ಬೇಗ ಇದನ್ನು ಪರಿಹರಿಸಲಾಗುವುದು ಎಂದು ಬಿಜೆಪಿಯ ಸಿಲ್ಚಾರ್ (ಎಸ್‌ಸಿ) ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮತ್ತು ಅಸ್ಸಾಂ ಸಚಿವ ಪರಿಮಳ್ ಸುಕ್ಲಬೈದ್ಯ ತಿಳಿಸಿದರು. ಬಾಂಗ್ಲಾದೇಶದಿಂದ ಕಣಿವೆಗೆ ವಲಸೆ ಬಂದ ಇವರಿಗೆ ಸರ್ಕಾರದಿಂದ ಸಲ್ಲಬೇಕಾದ ಸೌಲಭ್ಯ ಮತ್ತು ಸಹಾಯ ಸಿಗಲಿದೆ. ಈ ನಿಟ್ಟಿನಲ್ಲಿ ಅಂತಹ ಕಾನೂನು ತರಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.
ಬಾಂಗ್ಲಾದೇಶದೊಂದಿಗೆ 129 ಕಿ.ಮೀ ಗಡಿ ಹಂಚಿಕೊಳ್ಳುವ ಈ ಎರಡು ಕ್ಷೇತ್ರಗಳಲ್ಲಿ, ನೆರೆಯ ದೇಶದಿಂದ ಸ್ಥಳಾಂತರಗೊಂಡ ಹಿಂದೂ ಬಂಗಾಳಿಗಳ ಬಹುದೊಡ್ಡ ಜನಸಂಖ್ಯೆ ಇದೆ. ಯಾವುದೋ ಕಾರಣದಿಂದ ಕಾಲಕಾಲಕ್ಕೆ ಅವರು ಕಣಿವೆ ಪ್ರವೇಶಿಸಿದ್ದರು. ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಸಂಸತ್ತು ಕಾನೂನಾಗಿ ಜಾರಿಗೊಳಿಸಿದೆ. ಆದರೆ, ನಿಯಮಗಳ ರಚನೆಯ ನಂತರ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ಅವರಿಗೆ ಬೇಕಾದ ಸೌಲಭ್ಯ ನೀಡಲು ಸಾಧ್ಯವಾಗಲಿಲ್ಲ ಎಂದು ಸುಕ್ಲಬೈದ್ಯ ವಿವರಿಸಿದರು.
ವಿಭಜನೆಯಿಂದಾಗಿ ಪೌರತ್ವ ಸಮಸ್ಯೆ ಸೃಷ್ಟಿಯಾಗಿದ್ದು, 70 ವರ್ಷಗಳಿಂದ ಯಾವುದೇ ರಾಜಕೀಯ ಪಕ್ಷಗಳು ಅದನ್ನು ಪರಿಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಈ ಸಮಸ್ಯೆ ಉದ್ಭವಿಸಿದೆ. ಕೆಲವು ಸ್ಥಳೀಯರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕಷ್ಟಪಡುತ್ತಿರುವುದು ಕಂಡುಬಂದಿದೆ. ದಾಖಲೆಗಳ ಸಲ್ಲಿಕೆಗೆ ಸಂಬಂಧಿಸಿದ ಸಮಸ್ಯೆ ಸೇರಿದಂತೆ ಕೆಲವು ಅಡಚಣೆಗಳಿವೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಲಾಗಿದೆ. ಶೀಘ್ರದಲ್ಲೇ ಇದನ್ನು ಸರಳಗೊಳಿಸಲಾಗುವುದು. ಇದರ ಹೊರತಾಗಿ ಅನುಷ್ಠಾನದಲ್ಲಿಯೂ ಸಮಸ್ಯೆಗಳು ಉದ್ಭವಿಸಬಹುದು. ಅವುಗಳನ್ನು ಸಹಪರಿಹರಿಸಲು ನಾವು ಬದ್ಧ. ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ಅನಗತ್ಯ ಗಲಾಟೆ ಮಾಡುತ್ತಿವೆ. ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಮುಂದಿನ ಆರರಿಂದ ಎಂಟು ತಿಂಗಳಲ್ಲಿ ಎಲ್ಲ ಅಡೆತಡೆಗಳನ್ನು ನಿವಾರಿಸಲಾಗುವುದು ಎಂದು ಸುಕ್ಲಾಬೈದ್ಯ ಭರವಸೆ ಕೊಟ್ಟರು.
ಅನೇಕ ಜನರು ಸಿಎಎ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುತ್ತಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಏಕೆಂದರೆ ಅವರು ಆ ದೇಶದಿಂದ ಸ್ಥಳಾಂತರಗೊಂಡಿದ್ದಾರೆ ಎಂದು ಸಾಬೀತುಪಡಿಸಲು ಬಾಂಗ್ಲಾದೇಶ ನೀಡಿದ ಸಂಬಂಧಿತ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಬರಾಕ್ ಕಣಿವೆಯಲ್ಲಿ ಸಂವಹನ ಮತ್ತು ಸಂಪರ್ಕವು ಇತರ ಪ್ರಮುಖ ಸಮಸ್ಯೆಗಳಾಗಿವೆ ಎಂದು ಅವರು ಹೇಳಿದರು.