ಮೊರದಾಬಾದ್, ಉತ್ತರಪ್ರದೇಶ: ಬೈಕ್ ಸವಾರನ ವೇಗದ ಚಾಲನೆ ಪರಿಣಾಮವಾಗಿ ಎರಡು ವರ್ಷದ ಚಿರತೆಯೊಂದು ಸಾವನ್ನಪ್ಪಿದ್ದು, ವ್ಯಕ್ತಿ ಅದೃಷ್ಟವಶಾತ್ ಬದುಕುಳಿದಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮೊರದಬಾದ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಬದುಕುಳಿದಿರುವ ಬೈಕ್ ಸವಾರನ ಸ್ಥಿತಿ ಗಂಭೀರವಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಏನಿದು ಘಟನೆ, ಹೀಗಿದೆ ಹಿನ್ನೆಲೆ: ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಥಕುರ್ವರ ಪೊಲೀಸ್ ಠಾಣೆಯ ಪ್ರದೇಶದ ಲೌಂಕಿ ಖುರ್ದಾ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಸವಾರ ಮತ್ತು ಚಿರತೆ ಇಬ್ಬರೂ ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಬಿದ್ದಿದ್ದಾರೆ. ಈ ಘಟನೆ ಗಮನಿಸಿದ ದಾರಿ ಹೋಕರು ಪೊಲೀಸರಿಗೆ ತಿಳಿಸಿದ್ದು, ಬಳಿಕ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ಆಗಮಿಸಿದೆ
ಅಪಘಾತಕ್ಕೆ ಒಳಗಾದ ಸವಾರ ಭೋಜ್ಪುರ್ ಪೊಲೀಸ್ ಠಾಣೆಯ ಥಿಕರಿ ಗ್ರಾಮದ ನಿವಾಸಿ ಸಾಜಿದ್ ಎಂದು ಗುರುತಿಸಲಾಗಿದೆ. ಈಗ ಲೌಂಕಿ ಕುರ್ದಾ ಗ್ರಾಮದ ಕಡೆಗೆ ತೆರಳುವಾಗ ಚಿರತೆಯೊಂದು ಬಯಲು ಪ್ರದೇಶದಿಂದ ರಸ್ತೆ ದಾಟಲು ಮುಂದಾಗಿದೆ. ಚಿರತೆ ನೋಡಿ ಗಾಬರಿಗೊಂಡ ಸಾಜಿದ್ ಬ್ರೇಕ್ ಹಾಕುವ ಭರದಲ್ಲಿ ಅದಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಜಿದ್ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದರೆ, ರಭಸದಿಂದ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಚಿರತೆ 10 ಮೀಟರ್ ದೂರಕ್ಕೆ ಹೋಗಿ ಬಿದ್ದಿದ್ದು, ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಸ್ಥಳಕ್ಕೆ ಆಗಮಿಸಿದ ಇನ್ಸ್ಪೆಕ್ಟರ್ ವಿವೇಕ್ ಶರ್ಮಾ, ಗಾಯಗೊಂಡ ಸಾಜೀದ್ ಅವರನ್ನು ತಕ್ಷಣವೇ ಸಿಎಚ್ಸಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಬಳಿಕ ಉನ್ನತ ಚಿಕಿತ್ಸಾ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದಾರೆ.
ಇದು ವನ್ಯಜೀವಿಗಳು ಓಡಾಡುವ ಪ್ರದೇಶ:ಅರಣ್ಯ ಇಲಾಖೆ ರೇಂಜರ್ ರವಿ ಕುಮಾರ್ ಗಂಗ್ವಾರ್ ಮಾತನಾಡಿ, ಸಾವನ್ನಪ್ಪಿದ ಚಿರತೆಯ ಶರೀರವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ವರದಿ ಬಂದ ಬಳಿಕ ಸಾವಿನ ಕಾರಣ ತಿಳಿದು ಬರಲಿದೆ. ಥಕುರದ್ವಾರ ಪ್ರದೇಶದಲ್ಲಿ ಅರಣ್ಯ ಗಡಿ ದಾಟಿ ಅನೇಕ ವನ್ಯ ಜೀವಿಗಳು ಓಡಾಡುತ್ತಿರುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ದಟ್ಟ ಮಂಜಿನಿಂದಾಗಿ ರಾಜಸ್ಥಾನದ ಭಿಲ್ವಾರದಲ್ಲಿ ಸರಣಿ ವಾಹನ ಅಪಘಾತ; ತಪ್ಪಿದ ಭಾರಿ ದುರಂತ