ನವದೆಹಲಿ:ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಸಂಘಟನೆಗಳು ತಮ್ಮ ಆಂದೋಲನವನ್ನು ಮುಂದುವರಿಸಲು ನಿರ್ಧರಿಸಿವೆ. ಇದೇ ವೇಳೆ, ಸಂವಿಧಾನದ 6ನೇ ಪರಿಚ್ಛೇದದ ಅಡಿ ರಕ್ಷಣಾತ್ಮಕ ಕ್ರಮಗಳನ್ನು 371ನೇ ವಿಧಿಯಡಿ ವಿಶೇಷ ನಿಬಂಧನೆಗಳ ಮೂಲಕ ಪರಿಹರಿಸಲು ಗೃಹ ಸಚಿವಾಲಯವು ಚಿಂತನೆ ಮಾಡುತ್ತಿದೆ.
ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್‌ನ ಹಿರಿಯ ಸದಸ್ಯ, ಕೆಡಿಎ ಸಹ ಅಧ್ಯಕ್ಷರೂ ಕಮರ್ ಅಲಿ ಅಖೂನ್ 'ಈಟಿವಿ ಭಾರತ್' ಜೊತೆ ಮಾತನಾಡಿ, ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಲಡಾಖ್‌ನ ಜನರ ಸಾಂವಿಧಾನಿಕ ಸುರಕ್ಷತೆಯನ್ನು ಕೇಂದ್ರ ಸರ್ಕಾರವು 371ನೇ ವಿಧಿಯ ಅಡಿಯಲ್ಲಿ ಖಚಿತಪಡಿಸುತ್ತದೆ ಎಂದು ಭರವಸೆ ನೀಡಿದ್ದರು. ಆದರೆ, ನಾವು ಪ್ರತ್ಯೇಕ ರಾಜ್ಯ ಮತ್ತು ಲಡಾಖ್‌ಅನ್ನು ಸಂವಿಧಾನದ 6ನೇ ಪರಿಚ್ಛೇದ ಅಡಿಯಲ್ಲಿ ಸೇರಿಸಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ತಿಳಿಸಿದರು.
371ನೇ ವಿಧಿಯು ಆರ್ಥಿಕ ಮತ್ತು ಸಾಂಸ್ಕೃತಿಕ ಹಿತಾಸಕ್ತಿಗಳ ರಕ್ಷಣೆ, ಸ್ಥಳೀಯ ಸವಾಲುಗಳನ್ನು ಎದುರಿಸಲು ಮತ್ತು ನಿರ್ದಿಷ್ಟ ಪ್ರದೇಶದ ಸಾಂಪ್ರದಾಯಿಕ ಕಾನೂನುಗಳನ್ನು ರಕ್ಷಿಸುತ್ತದೆ. 371ನೇ ವಿಧಿಯಡಿ ವಿಶೇಷ ನಿಬಂಧನೆಗಳು ಮಹಾರಾಷ್ಟ್ರ, ಈಶಾನ್ಯ ರಾಜ್ಯಗಳಾದ ಸಿಕ್ಕೀಂ, ಮಿಜೋರಾಂ, ಅರುಣಾಚಲ ಪ್ರದೇಶ, ಅಸ್ಸೋಂ, ನಾಗಾಲ್ಯಾಂಡ್, ಮಣಿಪುರದಲ್ಲಿ ಜಾರಿಯಲ್ಲಿವೆ.
ಲಡಾಖ್‌ನ ಎಲ್‌ಎಬಿ ಮತ್ತು ಕೆಡಿಎಯ ಆರು ಸದಸ್ಯರ ನಿಯೋಗವು ಶನಿವಾರ ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಲಡಾಖ್‌ನ ಸಮಸ್ಯೆಗಳನ್ನು ಪರಿಶೀಲಿಸಲು ರಚಿಸಲಾದ ಉನ್ನತ ಅಧಿಕಾರ ಸಮಿತಿಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿತ್ತು. ಈ ಸಭೆಯು ಸಕಾರಾತ್ಮಕವಾಗಿರಲಿಲ್ಲ. ಸರ್ಕಾರದ ಪ್ರತಿನಿಧಿಗಳು ಅಥವಾ ಗೃಹ ಸಚಿವರಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಲಡಾಖ್‌ಗೆ ರಾಜ್ಯ ಸ್ಥಾನಮಾನ, ಸಂವಿಧಾನದ 6ನೇ ಪರಿಚ್ಛೇದ ರಕ್ಷಣೆ, ಎರಡು ಲೋಕಸಭಾ ಸ್ಥಾನಗಳು ಮತ್ತು ಯುವಕರಿಗೆ ಉದ್ಯೋಗಾವಕಾಶಗಳು ಸೇರಿದಂತೆ ನಾಲ್ಕು ಅಂಶಗಳ ಬೇಡಿಕೆ ನಮ್ಮದಾಗಿದೆ ಎಂದು ಅಖೂನ್ ಹೇಳಿದರು.