ಮುಂಬೈ, ಮಹಾರಾಷ್ಟ್ರ: ಇಲ್ಲಿನ ಕುರ್ಲಾದಲ್ಲಿ ನಡೆದ ಭೀಕರ ಸಾರಿಗೆ ಬಸ್ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿದ್ದು, 50 ಜನರು ಗಾಯಗೊಂಡಿದ್ದರು. ಈ ಅಪಘಾತಕ್ಕೆ ಸಂಬಂಧಪಟ್ಟಂತೆ ತನಿಖೆ ಬಿರುಸಿನಿಂದ ಸಾಗುತ್ತಿದೆ. ಈ ನಡುವೆ ಪ್ರಕರಣದ ಆರೋಪಿ ಸಂಜಯ್ನನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದು, ಈ ಅಪಘಾತಕ್ಕೆ ಕಾರಣ ಏನು ಎಂಬುದರ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.
ಬ್ರೇಕ್ ಬದಲು ಕ್ಲಚ್: ಎಲೆಕ್ಟ್ರಾನಿಕ್ ಆಟೋಮೆಟಿಕ್ ವಾಹನ ಚಾಲನೆ ಅನುಭವ ಇಲ್ಲದ ಚಾಲಕ ಸಂಜಯ್, ವಾಹನ ನಿಯಂತ್ರಿಸಲು ಬ್ರೇಕ್ ಬದಲಾಗಿ ಕ್ಲಚ್ ಒತ್ತಿದ್ದೇ ಈ ಅನಾಹುತಕ್ಕೆ ಕಾರಣ ಎಂಬ ವಿಚಾರ ಪ್ರಾಥಮಿಕ ವಿಚಾರಣೆ ಸಂದರ್ಭದಲ್ಲಿ ತಿಳಿದು ಬಂದಿದೆ.
ಸಂಜಯ್ ಈ ಮುಂಚೆ ಮಿನಿ ಬಸ್ ಚಾಲನೆ ಮಾಡುತ್ತಿದ್ದ. ಈ ಬಸ್ನಲ್ಲಿ ಕ್ಲಚ್, ಬ್ರೇಕ್ ಮತ್ತು ಆಕ್ಸಿಲೇಟರ್ ವ್ಯವಸ್ಥೆ ಇತ್ತು. ಇದೇ ವಾಹನದಲ್ಲಿ ಈತ 10 ದಿನ ತರಬೇತಿ ಕೂಡಾ ಪಡೆದುಕೊಂಡಿದ್ದ. ಇದಾದ ಬಳಿಕ ಆತನಿಗೆ ನೇರವಾಗಿ ದೊಡ್ಡ ಬಸ್ ಚಾಲನೆಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಇದೇ ಈಗ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸಂಜಯ್ ಬೆಸ್ಟ್ (ಮಹಾರಾಷ್ಟ್ರ ಸಾರಿಗೆ) ನಲ್ಲಿ ಕಳೆದ ಮೂರರಿಂದ ನಾಲ್ಕು ವರ್ಷಗಳಿಂದ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಈ ವಾಹನಗಳು ಡಿಸೇಲ್ ಮತ್ತು ಪೆಟ್ರೋಲ್ ವಾಹನಳಾಗಿದ್ದವು ಎಂಬುದು ಗಮನಾರ್ಹ. ಅಲ್ಲದೇ, ಇವೆಲ್ಲ ಮಿನಿ ವಾಹನಗಳಾಗಿದ್ದವು. ಇವುಗಳು ಕ್ಲಚ್, ಗೇರ್ ಮುಂತಾದ ಇನ್ಸ್ಟ್ರುಮೆಂಟ್ಗಳನ್ನು ಹೊಂದಿದ್ದವು. ಆದರೆ ಆತ ಎಂದಿಗೂ ಸ್ವಯಂಚಾಲಿತ ವಾಹನವನ್ನು ಓಡಿಸಿ ಅನುಭವ ಹೊಂದಿರಲಿಲ್ಲ. ಹೀಗಾಗಿಯೇ ಪ್ರಮಾದ ಜರುಗಿದ್ದು, ದೊಡ್ಡ ಅನಾಹುತಕ್ಕೆ ಕಾರಣವಾಗಿದೆ.
ಆಟೋಮೆಟಿಕ್ ವಾಹನ ಚಾಲನೆ ಅನುಭವ ಇಲ್ಲದಿರುವುದೇ ಇಷ್ಟಕ್ಕೆಲ್ಲ ಕಾರಣ?: ಅಲ್ಲದೇ ಆರೋಪಿ, ಕೇವಲ 10 ದಿನಗಳ ತರಬೇತಿ ಪಡೆದಿದ್ದ. ಹೀಗಾಗಿ ಆತನಿಗೆ ಎಲೆಕ್ಟ್ರಾನಿಕ್ ಆಟೋಮೆಟಿಕ್ ವಾಹನ ಚಾಲನೆ ಬಗ್ಗೆ ಸಂಪೂರ್ಣವಾಗಿ ಜ್ಞಾನ ಲಭಿಸಿರಲಿಲ್ಲ. ಅಷ್ಟೇ ಅಲ್ಲ ಈ ಅಲ್ಪ ತರಬೇತಿ ಬಳಿಕ ಸಂಜಯ್ನಿಗೆ ದೊಡ್ಡ ವಾಹನ ಓಡಿಸುವ ಜವಾಬ್ದಾರಿ ನೀಡಲಾಗಿದೆ. ಇನ್ನು ವಾಹನಗಳಿಂದ ತುಂಬಿದ್ದ ರಸ್ತೆಯಲ್ಲಿ ಬಸ್ ನಿಲ್ಲಿಸುವ ವೇಳೆ ಆತ ಬ್ರೇಕ್ ಬದಲಿಗೆ ಕ್ಲಚ್ ಒತ್ತಿದ್ದು, ಭಾರಿ ಅನಾಹುತ ನಡೆಯಲು ಕಾರಣವಾಗಿದೆ. ಬ್ರೇಕ್ ಎಂದು ಭಾವಿಸಿ ಕ್ಲಚ್ ಜೋರಾಗಿ ಒತ್ತಿದ ಪರಿಣಾಮ ಬಸ್ ವೇಗವಾಗಿ ಸಾಗಿದ್ದು, ಗೋಡೆಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಅಪಘಾತದ ಕುರಿತು ತನಿಖೆಗಾಗಿ ಬೆಸ್ಟ್ ಸಾರಿಗೆ ಇಲಾಖೆಯ ಇಂಜಿನಿಯರಿಂಗ್ ವಿಭಾಗದಿಂದ ತನಿಖಾ ತಂಡ ರಚಿಸಲಾಗಿದೆ. ಅಪಘಾತಕ್ಕೆ ಕಾರಣವಾಗಿರುವ ಚಾಲಕನನ್ನು ಡಿಸೆಂಬರ್ 21ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ವಿವಾದ ಎಬ್ಬಿಸಿದ ಅಲಹಾಬಾದ್ ಹೈಕೋರ್ಟ್ ಜಡ್ಜ್ ಹೇಳಿಕೆ: ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್