ಕೋಲ್ಕತ್ತಾ(ಪಶ್ಚಿಮ ಬಂಗಾಳ):ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ತೀವ್ರಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಐವರು ವೈದ್ಯರಿಗೆ ಸಮನ್ಸ್ ನೀಡಿದೆ. ಇದೇ ವೇಳೆ ಕೆಲ ಕಿಡಿಗೇಡಿಗಳ ಗುಂಪೊಂದು ಆಸ್ಪತ್ರೆಯ ಮೇಲೆ ದಾಳಿ ನಡೆಸಿದ್ದು, ಪೀಠೋಪಕಣಗಳನ್ನು ಧ್ವಂಸ ಮಾಡಲಾಗಿದೆ. ಇದರಲ್ಲಿ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಸಮನ್ಸ್ ಪಡೆದ ಆಸ್ಪತ್ರೆಯ ಐವರು ವೈದ್ಯರ ಪೈಕಿ ಸಂಜಯ್ ವಸಿಷ್ಠ ಎಂಬವರು ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಎದೆರೋಗ ತಜ್ಞ ಅರುಣಾಭ ದತ್ತಾ ಚೌಧರಿ ಸೇರಿ ಉಳಿದವರು ಸಮನ್ಸ್ ಪಾಲಿಸಿಲ್ಲ. ಸಾಕ್ಷ್ಯ ಸಂಗ್ರಹದ ಭಾಗವಾಗಿ ಇವರ ಹೇಳಿಕೆಗಳನ್ನು ದಾಖಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಕೋಲ್ಕತ್ತಾ ಹೈಕೋರ್ಟ್‌ನ ನಿರ್ದೇಶನದ ನಂತರ ಸಿಬಿಐ ತನಿಖೆ ಆರಂಭಿಸಿದೆ. ಸಾಂದರ್ಭಿಕ ಪುರಾವೆಗಳನ್ನು ಸಂಗ್ರಹಿಸಿರುವ ಕಾರಣ ವೈದ್ಯರ ಜೊತೆಗೆ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿಯನ್ನೂ ವಿಚಾರಣೆ ನಡೆಸಲಿದೆ. ಕಾಲೇಜಿನ ಪ್ರಾಂಶುಪಾಲರಾಗಿದ್ದ ಸಂದೀಪ್ ಘೋಷ್ ಅವರನ್ನು ಹೆಚ್ಚಿನ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಪ್ರಕರಣದ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಮೂವರು ಸದಸ್ಯರ ತಂಡವನ್ನು ರಚಿಸಿಕೊಂಡಿದೆ.