ಕಲಬುರಗಿ:ಮಹಾಘಟಬಂಧನದಿಂದ ನಿತೀಶ್ ಕುಮಾರ್ ನಿರ್ಗಮಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ''ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ನಡೆಯುತ್ತದೆ ಎಂದು ನನಗೆ ಗೊತ್ತಿತ್ತು ಎಂದಿರುವ ಅವರು, "ದೇಶದಲ್ಲಿ ಆಯಾ ರಾಮ್-ಗಯಾ ರಾಮ್ ರೀತಿಯ ಅನೇಕ ಜನರಿದ್ದಾರೆ'' ಎಂದು ಟೀಕಿಸಿದರು.
"ಮೊದಲು ಅವರು ಮತ್ತು ನಾವು ಒಟ್ಟಿಗೆ ಜಗಳವಾಡುತ್ತಿದ್ದೆವು. ನಾನು ಲಾಲುಜಿ ಮತ್ತು ತೇಜಸ್ವಿ ಅವರೊಂದಿಗೆ ಮಾತನಾಡುವ ಸಮಯದಲ್ಲಿ ನಿತೀಶ್ ಹೋಗುತ್ತಿದ್ದರು. ಅವರು ಉಳಿಯಲು ಬಯಸಿದರೆ, ಅವರು ಉಳಿಯುತ್ತಿದ್ದರು. ಆದರೆ, ಅವರು ಹೋಗಬೇಕೆಂದೇ ಬಯಸುತ್ತಾರೆ. ಆದ್ದರಿಂದ ನಮಗೆ ಇದು ಮೊದಲೇ ತಿಳಿದಿತ್ತು. ಆದರೆ, ಇಂಡಿಯಾ ಮೈತ್ರಿಕೂಟವನ್ನು ಯಥಾಸ್ಥಿತಿಯಲ್ಲಿಡಲು ಪ್ರಯತ್ನ ಮಾಡುತ್ತಿದ್ದೆವು. ಈ ಮಾಹಿತಿಯನ್ನು ಈಗಾಗಲೇ ಲಾಲು ಪ್ರಸಾದ್ ಯಾದವ್ ಮತ್ತು ತೇಜಸ್ವಿ ಯಾದವ್ ನಮಗೆ ನೀಡಿದ್ದರು. ಇಂದು ನಿಜವಾಯಿತು'' ಎಂದರು.
ಜನತಾ ದಳ (ಯುನೈಟೆಡ್) ರಾಷ್ಟ್ರೀಯ ಅಧ್ಯಕ್ಷ ನಿತೀಶ್ ಕುಮಾರ್ ಭಾನುವಾರ ಪಾಟ್ನಾದ ರಾಜಭವನಕ್ಕೆ ಆಗಮಿಸಿ ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ನೀಡಿದರು. ನಿತೀಶ್ ಅವರು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ) ಮರುಸೇರ್ಪಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೈತ್ರಿಕೂಟದ ಆಡಳಿತಕ್ಕೆ ಅಂತ್ಯ ಹಾಡಿದ್ದಾರೆ.